ಒಲಿಂಪಿಕ್ಸ್ ನಲ್ಲಿ ಇಸ್ರೇಲಿ ಅಥ್ಲೆಟಿಕ್ಸ್ ಗಳಿಗೆ ಸ್ವಾಗತ : ಫ್ರಾನ್ಸ್
PC : Olympics.com
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಗೆ ಇಸ್ರೇಲಿನ ಕ್ರೀಡಾಪಟುಗಳಿಗೆ ಸ್ವಾಗತವಿದೆ. ಒಲಿಂಪಿಕ್ಸ್ ಗೆ ಆಗಮಿಸುವ ಇಸ್ರೇಲ್ ನಿಯೋಗದ ಭದ್ರತೆಯನ್ನು ನಾವು ಖಾತರಿಪಡಿಸುತ್ತೇವೆ ಎಂದು ಫ್ರಾನ್ಸ್ ನ ವಿದೇಶಾಂಗ ಸಚಿವ ಸ್ಟೀಫನ್ ಸೆಜೋರ್ನ್ ಸೋಮವಾರ ಹೇಳಿದ್ದಾರೆ.
ಫ್ರಾನ್ಸ್ ನ ಕಟ್ಟಾ ಎಡಪಂಥೀಯ ಸಂಸದರೊಬ್ಬರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ಕ್ರೀಡಾಪಟುಗಳಿಗೆ ಅವಕಾಶ ನೀಡಬಾರದು ಎಂದು ಸರಕಾರವನ್ನು ಆಗ್ರಹಿಸಿದ್ದರು. ಫೆಲೆಸ್ತೀನ್ ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಎಡಪಂಥೀಯ ಸಂಸದ ಥೋಮಸ್ ಪೋರ್ಟೆಸ್ ` ಪ್ಯಾರಿಸ್ ಒಲಿಂಪಿಕ್ಸ್ ಗೆ ಇಸ್ರೇಲ್ನ ಕ್ರೀಡಾಪಟುಗಳಿಗೆ ಸ್ವಾಗತವಿಲ್ಲ. ಇಸ್ರೇಲ್ ಭಾಗವಹಿಸುವಿಕೆಯನ್ನು ವಿರೋಧಿಸುವವರು ಒಗ್ಗೂಡಬೇಕೆಂದು' ಕರೆ ನೀಡಿದ್ದರು. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಶ್ಯವನ್ನು ನಿಷೇಧಿರಿಸಿರುವಂತೆಯೇ ಇಸ್ರೇಲ್ ಧ್ವಜ ಮತ್ತು ರಾಷ್ಟ್ರಗೀತೆಯನ್ನು ನಿಷೇಧಿಸುವಂತೆ ಫ್ರಾನ್ಸ್ ನ ರಾಜತಾಂತ್ರಿಕರು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮೇಲೆ ಒತ್ತಡ ತರಬೇಕು ಎಂದು ಪೋರ್ಟೆಸ್ ಆಗ್ರಹಿಸಿದ್ದರು.
ಪೋರ್ಟೆಸ್ ಅವರ ಹೇಳಿಕೆಯನ್ನು ಹಲವು ಸಂಸದರು ಮತ್ತು ಮುಖಂಡರು ಖಂಡಿಸಿದ್ದಾರೆ. ಪೋರ್ಟೆಸ್ ಅವರ ಹೇಳಿಕೆ ಬೇಜವಾಬ್ದಾರಿ ಮತ್ತು ಅಪಾಯಕಾರಿಯಾಗಿದೆ. ಇಸ್ರೇಲ್ ಕ್ರೀಡಾ ನಿಯೋಗದ ಸುರಕ್ಷತೆಯನ್ನು ನಾವು ಖಾತರಿಪಡಿಸುತ್ತೇವೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.