ಭಾರತ ವಿರುದ್ಧ ವೆಸ್ಟ್ ಇಂಡೀಸ್ ಗೆ ಜಯ; ಸರಣಿ ಸಮಬಲ
Photo: twitter.com/ICC
ಹೊಸದಿಲ್ಲಿ: ಭಾರತದ ವಿಶ್ವಕಪ್ ಆಕಾಂಕ್ಷಿ ತಂಡದ ಬ್ಯಾಟಿಂಗ್ ಯೋಜನೆ ಕಿಂಗ್ಸ್ಟನ್ ಓವಲ್ನಲ್ಲಿ ಕೈಕೊಟ್ಟಿತು. ಪ್ರವಾಸಿ ಭಾರತ ತಂಡದ ವಿರುದ್ಧ ಶನಿವಾರ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆರು ವಿಕೆಟ್ಗಳ ಸುಲಭ ಜಯ ಸಾಧಿಸುವ ಮೂಲಕ ಅತಿಥೇಯರು ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದರು.
ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ರೊಮಾರಿಯೊ ಶೆಪರ್ಡ್ ಮತ್ತು ಗುಡಾಕೇಶ್ ಮೋಟಿಯವರ ಅದ್ಭುತ ಬೌಲಿಂಗ್ ಎದುರು ಪರದಾಡಿದ ಭಾರತದ ಮಧ್ಯಮ ಕ್ರಮಾಂಕದ ಆಟಗಾರರು, ವೇಗ, ಬೌನ್ಸ್ ಮತ್ತು ತಿರುವುಗಳಿಗೆ ಸುಲಭದ ತುತ್ತಾಗಿ 40.5 ಓವರ್ಗಳಲ್ಲಿ 181 ರನ್ಗಳಿಗೆ ಶರಣಾದರು.
ಸುಲಭದ ಗುರಿಯನ್ನು ಬೆನ್ನಟ್ಟಿದ ವೆಸ್ಟ್ಇಂಡೀಸ್ ಕೂಡಾ ಒಂದು ಹಂತದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿತಿಉ. ಶಾರ್ದೂಲ್ ಠಾಕೂರ್ ಅವರ ಪ್ರಭಾವಿ ಬೌಲಿಂಗ್ (8 ಓವರ್ಗಳಲ್ಲಿ 42ಕ್ಕೆ 3) ಹೊರತಾಗಿಯೂ, ನಾಯಕ ಶಾಯ್ ಹೋಪ್ (80 ಎಸೆತಗಳಲ್ಲಿ ಅಜೇಯ 63) ಇನಿಂಗ್ಸ್ಗೆ ಲಂಗರು ಹಾಕಿದರು. 65 ಎಸೆತಗಳಲ್ಲಿ 48 ರನ್ ಗಳಿಸಿದ ಕಾರ್ಟಿ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರು ಮುರಿಯದ 5ನೇ ವಿಕೆಟ್ಗೆ 91 ರನ್ ಸೇರಿಸಿ, ಕೇವಲ 36.4 ಓವರ್ಗಳಲ್ಲಿ ಗೆಲುವಿನ ಗುರಿ ತಲುಪಿಸಿದರು.
ಭಾರತ ತಂಡ ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿತ್ತು. ಇದು ಭಾರತಕ್ಕೆ ಮುಳುವಾಯಿತು ಹಾಗೂ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಕಾರಣವಾಯಿತು. ಮಧ್ಯಮ ಕ್ರಮಾಂಕದ ಯಾವ ಬ್ಯಾಟ್ಸ್ಮನ್ಗಳು ಕೂಡಾ ವೆಸ್ಟ್ಇಂಡೀಸ್ ದಾಳಿಯನ್ನು ಎದುರಿಸುವ ಛಾತಿ ಪ್ರದರ್ಶಿಸಲಿಲ್ಲ.
ಭಾರತದ ಪರ ಇಶಾನ್ ಕಿಶನ್ (55) ಹಾಗೂ ಶುಭಮನ್ ಗಿಲ್ (34) ಉತ್ತಮ ಆರಂಭ ಒದಗಿಸಿದರು. 17.3 ಓವರ್ಗಳಲ್ಲಿ 95 ರನ್ಗಳ ಮೊದಲ ವಿಕೆಟ್ ಜತೆಯಾಟದ ಬಳಿ ಇಬ್ಬರೂ ಆರಂಭಿಕ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ವಾಪಸ್ಸಾದರು. ಇಲ್ಲಿಂದ ಭಾರತದ ಕುಸಿತ ಆರಂಭವಾಯಿತು. ಸಂಜು ಸ್ಯಾಮ್ಸನ್ (9), ಅಕ್ಷರ್ ಪಟೇಲ್ (1) ಮತ್ತು ಹಾರ್ದಿಕ್ ಪಾಂಡ್ಯ (7) ಎರಡಂಕಿ ತಲುಪಲೂ ವಿಫಲರಾದರು.