ಐಪಿಎಲ್ ಫೈನಲ್ ಗೆ ಮಳೆ ಅಡ್ಡಿಯಾದರೆ ಏನಾಗುತ್ತದೆ? ಇಲ್ಲಿದೆ ಸ್ವಾರಸ್ಯಕರ ಮಾಹಿತಿ
PC: x.com/IPL
ಹೊಸದಿಲ್ಲಿ: ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡದ ನಡುವಿನ ಐಪಿಎಲ್ ಫೈನಲ್ ಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ, ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡರೆ ಫಲಿತಾಂಶ ಏನಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಶನಿವಾರ ಕೆಕೆಆರ್ ಅಂತಿಮ ಅಭ್ಯಾಸ ಪಂದ್ಯದ ವೇಳೆ ದಿಢೀರನೇ ಮಳೆ ಸುರಿದಿರುವುದು ಈ ಆತಂಕಕ್ಕೆ ಕಾರಣ.
ಎಸ್ ಆರ್ ಎಚ್ ಆಟಗಾರರು ಫೈನಲ್ ಪಂದ್ಯದ ಮುನ್ನಾ ದಿನ ವಿಶ್ರಾಂತಿ ಪಡೆದಿದ್ದರೆ, ಕೆಕೆಆರ್ ಆಟಗಾರರು ಸಂಜೆ ಫ್ಲಡ್ ಲೈಟ್ ನಲ್ಲಿ ಅಭ್ಯಾಸಕ್ಕೆ ಮುಂದಾಗಿದ್ದರು. ಆಟಗಾರರು ಪೂರ್ವಭಾವಿಯಾಗಿ ಫುಟ್ ಬಾಲ್ ಅಭ್ಯಾಸ ಮಾಡುತ್ತಿದ್ದಾಗ ಸುರಿದ ಭಾರೀ ಮಳೆ ಅವರನ್ನು ಪೆವಿಲಿಯನ್ ನಲ್ಲೇ ಕಾಯುವಂತೆ ಮಾಡಿತು. ಆಟಗಾರರು ಮಳೆಯಿಂದ ಆಸರೆ ಬಯಸಿದರೂ, ಮೈದಾನ ಸಿಬ್ಬಂದಿ ಫೈನಲ್ ಪಂದ್ಯಕ್ಕಾಗಿ ನಿಯೋಜಿಸಿರುವ ನಾಲ್ಕನೇ ಪಿಚ್ ಗೆ ಹೊದಿಕೆ ಹಾಕುವಲ್ಲಷ್ಟೇ ಸಫಲರಾದರು.
ಭಾನುವಾರ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಮೋಡ ಕವಿದ ವಾತಾವರಣ ಹಾಗೂ ಕಡಿಮೆ ಆದ್ರ್ರತೆ ನಿರೀಕ್ಷಿಸಲಾಗಿದೆ. ಆದರೆ ಉತ್ತರ ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡಿನ ರಾಜಧಾನಿಯಲ್ಲಿ ಅಲ್ಪಮಳೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಒಂದು ವೇಳೆ ಪಂದ್ಯಕ್ಕೆ ಮಳೆ ಬಾಧಿಸಿದರೂ, ಮೀಸಲು ದಿನ ಇಡಲಾಗಿದ್ದು, ಸೋಮವಾರ ಅನುಕೂಲಕರ ವಾತಾವರಣ ನಿರೀಕ್ಷಿಸಲಾಗಿದೆ. ಐಪಿಎಲ್ ಫೈನಲ್ ಗೆ ಮಳೆ ಬಾಧಿಸಿದರೆ, ಡಕ್ವರ್ತ್-ಲೂಯಿಸ್-ಸ್ಟರ್ನ್ (DLS) ವಿಧಾನದ ಮೂಲಕ ಪಂದ್ಯವನ್ನು ಹೊಂದಿಸಲಾಗುತ್ತದೆ. ಇಡೀ ಪಂದ್ಯ ನಡೆಸುವುದು ಸಾಧ್ಯವಾಗದಿದ್ದರೆ ಸೋಮವಾರ ಫೈನಲ್ ನಡೆಯುತ್ತಿದೆ. ಮೀಸಲು ದಿನ ಕೂಡಾ ಮಳೆ ಮುಂದುವರಿದರೆ, ಐಪಿಎಲ್ ಅಂಕಪಟ್ಟಿಯನ್ನು ಆಧರಿಸಿ ವಿಜೇತ ತಂಡವನ್ನು ನಿರ್ಧರಿಸಲಾಗುತ್ತದೆ. ಹಾಗಾದಲ್ಲಿ ಟ್ರೋಫಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಕೊಲ್ಕತ್ತಾ ನೈಟ್ರೈಡರ್ಸ್ ಪಾಲಾಗಲಿದೆ.