ನಾಳೆ ಭಾರತ-ನ್ಯೂಝಿಲೆಂಡ್ ಫೈನಲ್ ಹಣಾಹಣಿ: ಮಳೆಯಿಂದ ಪಂದ್ಯ ರದ್ದಾದರೆ ಯಾರಿಗೆ ಟ್ರೋಫಿ?

Photo credit: X/@ICC
ದುಬೈ: ನಾಳೆ (ಮಾರ್ಚ್ 9) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2025ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಇದಕ್ಕೂ ಮುನ್ನ ನಡೆದಿದ್ದ ಮೊದಲ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿದ್ದ ಭಾರತ ತಂಡ, ಫೈನಲ್ ಗೆ ರಹದಾರಿ ಗಿಟ್ಟಿಸಿತ್ತು. ಎರಡನೆ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು 50 ರನ್ ಗಳಿಂದ ಪರಾಭವಗೊಳಿಸಿದ್ದ ನ್ಯೂಝಿಲೆಂಡ್ ತಂಡ ಕೂಡಾ ಫೈನಲ್ ಗೆ ಪ್ರವೇಶಿಸಿತ್ತು.
ರವಿವಾರ ಭಾರತೀಯ ಕಾಲಮಾನ 2.30ಕ್ಕೆ ಸರಿಯಾಗಿ ಫೈನಲ್ ಪಂದ್ಯ ಪ್ರಾರಂಭಗೊಳ್ಳಲಿದ್ದು, ರೋಹಿತ್ ಶರ್ಮಾ ಹಾಗೂ ಮಿಚೆಲ್ ಸ್ಯಾಂಟ್ನರ್ ಪಡೆಗಳು ಟ್ರೋಫಿಗಾಗಿ ಸೆಣಸಲಿವೆ. ಭಾರತ ತಂಡವು ಐತಿಹಾಸಿಕ ಮೂರನೆ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದರೆ, ನ್ಯೂಝಿಲೆಂಡ್ ತಂಡ ಎರಡನೆ ಟ್ರೋಫಿಯ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು ಮೂರು ಪಂದ್ಯಗಳು ಮಳೆಗೆ ಬಲಿಯಾಗಿವೆ. ಆಸ್ಟ್ರೇಲಿಯ ವರ್ಸಸ್ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ವರ್ಸಸ್ ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ವರ್ಸಸ್ ಆಸ್ಟ್ರೇಲಿಯ ತಂಡಗಳ ನಡುವಿನ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದ್ದವು. ಆದರೆ, ಈ ಮೂರೂ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದಿದ್ದವು. ದುಬೈನಲ್ಲಿ ಈವರೆಗೆ ನಡೆದಿರುವ ನಾಲ್ಕು ಪಂದ್ಯಗಳಿಗೆ ಯಾವುದೇ ಮಳೆಯ ಅಡಚಣೆಯುಂಟಾಗಿಲ್ಲ. ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯಕ್ಕೆ ಮಳೆಯ ಅಡಚಣೆ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.
ಒಂದು ವೇಳೆ ಮಳೆಯ ಕಾರಣದಿಂದ ರವಿವಾರದ ಫೈನಲ್ ಪಂದ್ಯ ರದ್ದುಗೊಂಡರೆ, ಸೋಮವಾರದಂದು ಮೀಸಲು ದಿನವನ್ನು ನಿಗದಿಗೊಳಿಸಲಾಗಿದೆ. ಒಂದು ವೇಳೆ ಪಂದ್ಯದ ನಡುವೆಯೇನಾದರೂ ಮಳೆಯ ಅಡಚಣೆಯುಂಟಾದರೆ, ಮೀಸಲು ದಿನದಂದು ಪಂದ್ಯ ಸ್ಥಗಿತಗೊಂಡಿದ್ದಲ್ಲಿಂದಲೇ ಪಂದ್ಯವನ್ನು ಪುನಾರಂಭಿಸಲಾಗುತ್ತದೆ.
ಈ ನಡುವೆ, ಮೀಸಲು ದಿನವೂ ಕೂಡಾ ಪಂದ್ಯ ನಡೆಯದಿದ್ದರೆ, ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಟ್ರೋಫಿಯನ್ನು ಹಂಚಲಾಗುತ್ತದೆ. 2002ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ವೇಳೆಯೂ ಇದೇ ರೀತಿ ಮಾಡಲಾಗಿತ್ತು. ಅಂದು ನಿರಂತರವಾಗಿ ಮಳೆ ಸುರಿದು, ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗದೆ ಇದ್ದುದರಿಂದ, ಎರಡೂ ತಂಡಗಳ ನಡುವೆ ಟ್ರೋಫಿಯನ್ನು ಹಂಚಲಾಗಿತ್ತು.