ಭಾರತದ ಹೀನಾಯ ಸೋಲಿನ ಬಳಿಕ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಯಾವ ದೇಶ ಎಲ್ಲಿದೆ?
PC: x.com/tiwariaatul
ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಅಗ್ರಸ್ಥಾನ ಕಾಪಾಡಿಕೊಂಡಿದೆ.
ಈ ಸೋಲಿನ ಬಳಿಕ ಭಾರತದ ಪಿಸಿಟಿ 74.24 ಆಗಿದೆ. ಇನ್ನೊಂದೆಡೆ ನ್ಯೂಝಿಲೆಂಡ್ ತಂಡ 44.44 ಪಿಸಿಟಿಯೊಂದಿಗೆ ನಾಲ್ಕನೇ ಸ್ಥಾನಕ್ಕೇರಿದೆ. 36 ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಟೆಸ್ಟ್ ಗೆದ್ದ ಸಾಧನೆಯನ್ನು ನ್ಯೂಝಿಲೆಂಡ್ ತಂಡ ಮಾಡಿದೆ.
ಆಸ್ಟ್ರೇಲಿಯಾ ತಂಡ 62.5 ಯಶಸ್ಸಿನ ದರದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 55.56 ಪಿಸಿಟಿಯೊಂದಿಗೆ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. 25.93 ಪಿಸಿಟಿಯೊಂದಿಗೆ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದ್ದು, ವೆಸ್ಟ್ಇಂಡೀಸ್ ಈ ಪಟ್ಟಿಯ ಕೊನೆಯಲ್ಲಿದೆ.
ಭಾರತ ಪ್ರಸಕ್ತ ಅವಧಿಯಲ್ಲಿ ಆಡಿದ 12 ಪಂದ್ಯಗಳ ಪೈಕಿ 8ನ್ನು ಗೆದ್ದು, ಮೂರು ಪಂದ್ಯಗಳನ್ನು ಸೋತಿದೆ. ಒಂದು ಪಂದ್ಯ ಡ್ರಾ ಆಗಿದ್ದು, ಒಟ್ಟು 98 ಅಂಕಗಳನ್ನು ಕಲೆ ಹಾಕಿದೆ. ಆಸ್ಟ್ರೇಲಿಯಾ ಕೂಡಾ ಇಷ್ಟೇ ಪಂದ್ಯಗಳನ್ನು ಆಡಿ ಭಾರತ ಗೆದ್ದಷ್ಟೇ ಪಂದ್ಯಗಳನ್ನು ಗೆದ್ದಿದ್ದರೂ 90 ಅಂಕ ಪಡೆದಿದೆ. 9 ಪಂದ್ಯಗಳ ಪೈಕಿ 5ನ್ನು ಗೆದ್ದು 4 ಪಂದ್ಯಗಳಲ್ಲಿ ಸೋತ ಶ್ರೀಲಂಕಾ 60 ಅಂಕ ಕಲೆ ಹಾಕಿದೆ. 9 ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದು, 5ನ್ನು ಸೋತಿರುವ ನ್ಯೂಝಿಲೆಂಡ್ 48 ಅಂಕಗಳನ್ನು ಹೊಂದಿದೆ.