ಸತತ ಆರು ಜಯದ ಬಳಿಕವೂ ಭಾರತ ಸೆಮೀಸ್ ಪ್ರವೇಶಿಸಿಲ್ಲ ಏಕೆ?
ಲಕ್ನೋ: ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಆರನೇ ಪಂದ್ಯವನ್ನೂ ಗೆದ್ದ ಭಾರತಕ್ಕೆ ಇನ್ನೂ ಸೆಮಿಫೈನಲ್ ಸ್ಥಾನ ಖಾತರಿಯಾಗಿಲ್ಲ. ಇಂಗ್ಲೆಂಡ್ ಸವಾಲನ್ನು 100 ರನ್ ಗಳ ಭರ್ಜರಿ ಅಂತರದಿಂದ ಬದಿಗೊತ್ತಿದರೂ, ಸೆಮಿಫೈನಲ್ ತಲುಪಿಲ್ಲ. ಇದಕ್ಕೂ ಮುನ್ನ ಭಾರತ ನ್ಯೂಝಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನಮತ್ತು ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತ್ತು.
ಅತಿಥೇಯ ಭಾರತ ತಂಡ ಇಡೀ ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿ ಉಳಿದ ಏಕೈಕ ತಂಡ ಎನಿಸಿದೆ. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದು, +1.405 ರನ್ ರೇಟ್ ಹೊಂದಿದ್ದು, ಇದು ಟೂರ್ನಿಯಲ್ಲಿ ಯಾವುದೇ ತಂಡ ಹೊಂದಿರದ ಎರಡನೇ ಅತ್ಯುತ್ತಮ ರನ್ರ ಟ್ ಆಗಿದೆ.
ರೋಹಿತ್ ಪಡೆ ಸೆಮಿಫೈನಲ್ ಪ್ರವೇಶಿಸುವ ತಂಡದಲ್ಲಿ ಫೇವರೆಟ್ ಆಗಿದ್ದರೂ, ಲೆಕ್ಕಾಚಾರದ ಪ್ರಕಾರ ಭಾರತ ತಂಡ ಇನ್ನೂ ಮುಂದಿನ ಹಂತಕ್ಕೆ ತೇರ್ಗಡೆಯಾಗಲ್ಲ. ಗುಂಪು ಹಂತದ ಪಂದ್ಯಗಳಲ್ಲಿ ಭಾರತಕ್ಕೆ ತೀರಾ ವ್ಯತಿರಿಕ್ತ ಫಲಿತಾಂಶಗಳು ಬಂದರೆ ಇನ್ನೂ ಅಂತಿಮ ನಾಲ್ಕರ ಘಟ್ಟದಿಂದ ಹೊರಬೀಳುವ ಸಾಧ್ಯತೆಗಳು ಇವೆ.
ಭಾರತ ಸದ್ಯಕ್ಕೆ 12 ಅಂಕಗಳನ್ನು ಹೊಂದಿದ್ದು, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಅಗ್ರ 4ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೆಣೆಸಾಟದಲ್ಲಿ ಗೆಲ್ಲುವ ತಂಡ ಕೂಡಾ 12 ಅಂಕ ಪಡೆಯುವ ಅವಕಾಶ ಇದೆ.
ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಸೇರಿದಂತೆ ಭಾರತ ಆಡಲಿರುವ ಮುಂದಿನ ಮೂರು ಪಂದ್ಯಗಳನ್ನು ಸೋತಲ್ಲಿ 12 ಅಂಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಘ್ಫಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ವಿಜೇತರ ಜತೆ ಮಾತ್ರ ಸೋಲಬೇಕು.
ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ಗೆಲ್ಲಬೇಕಾದ ಅನಿವಾರ್ಯತೆ ದಕ್ಷಿಣ ಆಫ್ರಿಕಾಗೆ ಇದ್ದು, ಭಾರತ ವಿರುದ್ಧದ ಪಂದ್ಯ ಗೆಲ್ಲಬೇಕು. ಆಗ ಐದು ತಂಡಗಳು 12 ಅಂಕಗಳನ್ನು ಪಡೆದಂತಾಗುತ್ತದೆ. ಈ ಕಾರಣದಿಂದ ಭಾರತ ಮೂರು ಪಂದ್ಯಗಳನ್ನು ಅಗಾಧ ಅಂತರದಿಂದ ಸೋತಲ್ಲಿ, ರೋಹಿತ್ ಪಡೆ ಸೆಮಿಫೈನಲ್ ಅವಕಾಶದಿಂದ ವಂಚಿತವಾಗಲಿದೆ.
ಆದರೆ ರೋಹಿತ್ ಶರ್ಮಾ ನೇತೃತ್ವದ ತಂಡದ ಫಾರ್ಮ್ ಹಿನ್ನೆಲೆಯಲ್ಲಿ ಈ ಸಾಧ್ಯತೆ ವಿರಳಾತಿವಿರಳ. ಗುರುವಾರ ಭಾರತ ತಂಡ ಶ್ರೀಲಂಕಾ ವಿರುದ್ಧ ಸೆಣೆಸಲಿದೆ.