ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ರೋಹಿತ್ ಮುಂದುವರಿಕೆ?

ರೋಹಿತ್ ಶರ್ಮಾ | PC : PTI
ಮುಂಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತದ ಅಮೋಘ ವಿಜಯದ ಬಳಿಕ, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅವರೇ ನಾಯಕನಾಗಿ ಮುಂದುವರಿಯುವ ಸಾಧ್ಯತೆಗಳಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ, ರೋಹಿತ್ ಶರ್ಮಾ ನಾಯಕತ್ವದ ತಂಡವು ತಾನಾಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಫೈನಲ್ ನಲ್ಲಿ ಅದು ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿದೆ. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಭಾರತದ ಪ್ರದರ್ಶನವೂ ಕಳಪೆಯಾಗಿತ್ತು. ಆ ಸರಣಿಯಲ್ಲಿ ಅವರು ಮೂರು ಪಂದ್ಯಗಳಲ್ಲಿ ಕೇವಲ 31 ರನ್ಗಳನ್ನು ಗಳಿಸಿದ್ದರು. ಆಗ ನಾಯಕನಾಗಿ ರೋಹಿತ್ರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ, ಚಾಂಪಿಯನ್ಸ್ ಟ್ರೋಫಿ ವಿಜಯವು ರೋಹಿತ್ ರ ಕ್ರೀಡಾಜೀವನವನ್ನು ವಿಸ್ತರಿಸಿದೆ ಹಾಗೂ ನಾಯಕತ್ವದ ವಿಷಯದಲ್ಲಿ ಅವರಿಗೆ ಬಿಸಿಸಿಐಯ ಬೆಂಬಲವಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
‘‘ತಾನು ಏನು ಮಾಡಬಲ್ಲೆ ಎನ್ನುವುದನ್ನು ಅವರು ತೋರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ತಂಡವನ್ನು ಅವರೇ ಸರಿಯಾದ ಅಭ್ಯರ್ಥಿ ಎಂಬುದಾಗಿ ಸಂಬಂಧಿಸಿದ ಪ್ರತಿಯೊಬ್ಬರೂ ಭಾವಿಸಿದ್ದಾರೆ. ಅದೂ ಅಲ್ಲದೆ, ಕೆಂಪು ಚೆಂಡಿನ ಕ್ರಿಕೆಟ್ (ಟೆಸ್ಟ್) ಆಡುವುದನ್ನು ಮುಂದುವರಿಸುವ ತನ್ನ ತವಕವನ್ನು ರೋಹಿತ್ ಕೂಡಾ ವ್ಯಕ್ತಪಡಿಸಿದ್ದಾರೆ’’ ಎಂದು ಮೂಲವೊಂದು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.