ಭಾರತ-ಆಸ್ಟ್ರೇಲಿಯ ಎರಡನೇ ಟೆಸ್ಟ್ನಲ್ಲಿ ರೋಹಿತ್ ಇನಿಂಗ್ಸ್ ಆರಂಭಿಸುವರೇ?
ರೋಹಿತ್ ಶರ್ಮಾ | PTI
ಅಡಿಲೇಡ್ : ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಡಿ.6ರಿಂದ ಆರಂಭವಾಗಲಿರುವ ಪಿಂಕ್ಬಾಲ್ ಟೆಸ್ಟ್ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿರುವ ಭಾರತ ಕ್ರಿಕೆಟ್ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ(ಬಿಜಿಟಿ)ಯಲ್ಲಿನ ಮುನ್ನಡೆಯ ಲಾಭ ವೃದ್ದಿಸಿಕೊಳ್ಳುವತ್ತ ಚಿತ್ತ ಹರಿಸಲಿದೆ.
ಪರ್ತ್ನಲ್ಲಿ ಭಾರತ ತಂಡ 295 ರನ್ನಿಂದ ಗೆದ್ದಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆಡಿರಲಿಲ್ಲ. ಆದರೆ ಈ ಇಬ್ಬರು ಎರಡನೇ ಪಂದ್ಯಕ್ಕೆ ಲಭ್ಯವಿರಲಿದ್ದಾರೆ. ಈ ಇಬ್ಬರ ವಾಪಸಾತಿಯಿಂದಾಗಿ ಭಾರತದ ಆಡುವ 11ರ ಬಳಗದಲ್ಲಿ ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆಯಾಗಲಿದೆ.
► ರೋಹಿತ್ ಇನಿಂಗ್ಸ್ ಆರಂಭಿಸುತ್ತಾರೆಯೇ?
ಪರ್ತ್ ಟೆಸ್ಟ್ನ ಎರಡನೇ ಇನಿಂಗ್ಸ್ ವೇಳೆ ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 205 ರನ್ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದ್ದರು. ಜೈಸ್ವಾಲ್ ಶತಕ ಗಳಿಸಿದ್ದರೆ, ರಾಹುಲ್ 77 ರನ್ ಗಳಿಸಿದ್ದರು.
ಆಸ್ಟ್ರೇಲಿಯ ಪ್ರಧಾನಮಂತ್ರಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಆಡಿದ್ದರೂ ರಾಹುಲ್ ಹಾಗೂ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದ್ದರು. ಈ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಅಡಿಲೇಡ್ನಲ್ಲೂ ಈ ಜೋಡಿಯನ್ನು ಮುಂದುವರಿಸುವ ಸುಳಿವು ನೀಡಿತ್ತು.
ರೋಹಿತ್ ಇತ್ತೀಚೆಗಿನ ದಿನಗಳಲ್ಲಿ ರನ್ಗಾಗಿ ಪರದಾಡುತ್ತಿದ್ದಾರೆ. ರೋಹಿತ್ ತನ್ನ ಕೊನೆಯ 5 ಪಂದ್ಯಗಳಲ್ಲಿ 13.30ರ ಸರಾಸರಿಯಲ್ಲಿ 4 ಇನಿಂಗ್ಸ್ನಲ್ಲಿ ಎರಡಂಕೆಯ ಸ್ಕೋರ್ ಗಳಿಸಿದ್ದರು.
ಬಿಜಿಟಿ ಯಂತಹ ಪ್ರಮುಖ ಸರಣಿಯಲ್ಲಿ ರೋಹಿತ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವ ಸಾಧ್ಯತೆ ಇಲ್ಲ. ಗಿಲ್, ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಕ್ರಮವಾಗಿ 3ನೇ, 4ನೇ ಹಾಗೂ 5ನೇ ಸ್ಥಾನದಲ್ಲಿ ಮುಂದುವರಿಯಲಿದ್ದು, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬದಲಾವಣೆಯಾಗಬಹುದು.
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರೋಹಿತ್ ಹಾಗೂ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದಾಗ ರಾಹುಲ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
► 2ನೇ ಟೆಸ್ಟ್ನಲ್ಲಿ ಯಾರು ಸ್ಥಾನ ಕಳೆದುಕೊಳ್ಳುತ್ತಾರೆ?
ರೋಹಿತ್ ಹಾಗೂ ಶುಭಮನ್ ಅವರು 2ನೇ ಟೆಸ್ಟ್ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ಬದಲಿಗೆ ಆಡುವ ಸಾಧ್ಯತೆಯಿದೆ.
ಶುಭಮನ್ ತನ್ನ 3ನೇ ಸ್ಥಾನ ಪಡೆದರೆ, ಜುರೆಲ್ ಅವರ 6ನೇ ಕ್ರಮಾಂಕವು ರಾಹುಲ್ ಪಾಲಾಗಬಹುದು. ರಾಹುಲ್ ಈ ಹಿಂದೆ ತನ್ನ ವೃತ್ತಿಜೀವನದಲ್ಲಿ ಇದೇ ಕ್ರಮಾಂಕದಲ್ಲಿ ಆಡಿದ್ದರು.
► ಅಶ್ವಿನ್ ಇಲ್ಲವೇ ಜಡೇಜ 2ನೇ ಟೆಸ್ಟ್ಗೆ ವಾಪಸಾಗುವರೇ?
ಮೊದಲ ಟೆಸ್ಟ್ನಲ್ಲಿ ವಾಶಿಂಗ್ಟನ್ ಸುಂದರ್ ಭಾರತ ತಂಡ ಕಣಕ್ಕಿಳಿಸಿರುವ ಏಕೈಕ ಸ್ಪಿನ್ನರ್ ಆಗಿದ್ದರು. ಸುಂದರ್ 2 ಇನಿಂಗ್ಸ್ಗಳಲ್ಲಿ ಕೇವಲ 17 ಓವರ್ ಬೌಲಿಂಗ್ ಮಾಡಿದ್ದರು. 2ನೇ ಇನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದಿದ್ದರು. ಕೆಳ ಸರದಿಯ ಬ್ಯಾಟರ್ಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ನಾಥನ್ ಲಿಯೊನ್ ವಿಕೆಟ್ ಉರುಳಿಸಿದ್ದರು.
ಆರ್.ಅಶ್ವಿನ್ ಅವರು ಪ್ರಧಾನಮಂತ್ರಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಹಿರಿಯ ಆಟಗಾರ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ರವೀಂದ್ರ ಜಡೇಜ ಅಭ್ಯಾಸ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿದ್ದರು. 5 ಓವರ್ ಬೌಲಿಂಗ್ ಮಾಡಿದ್ದ ಜಡೇಜ ಅವರು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಪಿಂಕ್ಬಾಲ್ ಟೆಸ್ಟ್ನಲ್ಲಿ ಭಾರತ ತಂಡವು ನಾಲ್ವರು ಬೌಲರ್ಗಳನ್ನು ಒಳಗೊಂಡ ವೇಗದ ದಾಳಿಯನ್ನು ಮುಂದುವರಿಸುವ ನಿರೀಕ್ಷೆ ಇದೆ. ಒಂದು ವೇಳೆ ಭಾರತ ತಂಡವು ಸುಂದರ್ರನ್ನು ಬದಲಿಸಲು ನಿರ್ಧರಿಸಿದರೆ ಅವರ ಸ್ಥಾನವನ್ನು ಜಡೇಜ ತುಂಬುವ ಸಾಧ್ಯತೆ ಇದೆ.
► ಭಾರತದ ಸಂಭಾವ್ಯ 11ರ ಬಳಗ
ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ಕೀಪರ್), ಕೆ.ಎಲ್.ರಾಹುಲ್, ವಾಶಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮುಹಮ್ಮದ್ ಸಿರಾಜ್ ಹಾಗೂ ಜಸ್ಪ್ರಿತ್ ಬುಮ್ರಾ.