ಈ ಬಾರಿ ಅಡಿಲೇಡ್ನಲ್ಲಿ ಮೇಲುಗೈ ಸಾಧಿಸುವುದೇ ರೋಹಿತ್ ಪಡೆ?
2020-21ರಲ್ಲಿ ಆಸ್ಟ್ರೇಲಿಯ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯ ಸೋತಿದ್ದ ಟೀಮ್ ಇಂಡಿಯಾ
ರೋಹಿತ್ ಶರ್ಮಾ | PC : PTI
ಮೆಲ್ಬರ್ನ್ : ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಅಡಿಲೇಡ್ ಓವಲ್ನಲ್ಲಿ ಡಿ.6ರಂದು ನಡೆಯಲಿದ್ದು, ಭಾರತ ತಂಡವು ಆತಿಥೇಯ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಪ್ರವಾಸಿ ತಂಡವು ಪರ್ತ್ ಟೆಸ್ಟ್ ಪಂದ್ಯವನ್ನು 295 ರನ್ ಅಂತರದಿಂದ ಗೆದ್ದ ನಂತರ ಸರಣಿಯಲ್ಲಿ ಸದ್ಯ 1-0 ಮುನ್ನಡೆಯಲ್ಲಿದೆ.
2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಂತೆಯೇ ಈ ಬಾರಿಯೂ ಅಡಿಲೇಡ್ನಲ್ಲಿ ಹಗಲು-ರಾತ್ರಿ ಪಂದ್ಯ ನಡೆಯಲಿದೆ. ಡೇ-ನೈಟ್ ಟೆಸ್ಟ್ಗೆ ತಯಾರಿ ನಡೆಸಲು ಭಾರತವು ಪ್ರಧಾನಮಂತ್ರಿ ಇಲೆವೆನ್ ವಿರುದ್ಧ ದ್ವಿದಿನ ಅಭ್ಯಾಸ ಪಂದ್ಯವನ್ನು ಆಡಿದೆ. ಮಳೆಯಿಂದಾಗಿ ಪಂದ್ಯವನ್ನು 50 ಓವರ್ಗಳಿಗೆ ಕಡಿತಗೊಳಿಸಲಾಗಿದ್ದು, ಭಾರತವು 6 ವಿಕೆಟ್ಗಳಿಂದ ಜಯ ಸಾಧಿಸಿತ್ತು.
2020-21ರ ಬಿಜಿಟಿ ಸರಣಿಯ ವೇಳೆ ಅಡಿಲೇಡ್ನಲ್ಲಿ ಆರಂಭಿಕ ಪಂದ್ಯವನ್ನು ಆಡಲಾಗಿತ್ತು. ಭಾರತವು ಸ್ವದೇಶದಿಂದ ಹೊರಗೆ ಆಡಿರುವ ಮೊತ್ತ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯ ಅದಾಗಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿತ್ತು. ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಬೇಗನೆ ವಿಕೆಟ್ ಕೈಚೆಲ್ಲಿದ್ದರೂ ಭಾರತವು ತನ್ನ ಮೊದಲ ಇನಿಂಗ್ಸ್ನಲ್ಲಿ ಒಟ್ಟು 244 ರನ್ ಗಳಿಸಿತ್ತು. ಕೊಹ್ಲಿ 74 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಲಾ 40 ರನ್ ಗಳಿಸಿ ಸಾಥ್ ನೀಡಿದ್ದರು.
ಭಾರತೀಯ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿ ಆತಿಥೇಯ ತಂಡವನ್ನು 191 ರನ್ಗೆ ನಿಯಂತ್ರಿಸಿದ್ದರು. ಆರ್.ಅಶ್ವಿನ್ 4 ವಿಕೆಟ್ಗಳನ್ನು ಪಡೆದಿದ್ದರೆ, ಜಸ್ಪ್ರಿತ್ ಬುಮ್ರಾ 3 ವಿಕೆಟ್ಗಳನ್ನು ಉರುಳಿಸಿದ್ದರು.
ಆದರೆ, ಭಾರತ ತಂಡವು 53 ರನ್ ಮುನ್ನಡೆ ಪಡೆದ ಹೊರತಾಗಿಯೂ ಎರಡನೇ ಇನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ(36 ರನ್)ಆಲೌಟಾಗಿತ್ತು. ಜೋಶ್ ಹೇಝಲ್ವುಡ್ ಐದು ವಿಕೆಟ್ ಗೊಂಚಲು ಪಡೆದರೆ, ಪ್ಯಾಟ್ ಕಮಿನ್ಸ್ ಅವರು 4 ವಿಕೆಟ್ಗಳನ್ನು ಉರುಳಿಸಿ ಪ್ರಾಬಲ್ಯ ಸಾಧಿಸಿದ್ದರು.
ಗೆಲ್ಲಲು 90 ರನ್ ಸುಲಭ ಗುರಿ ಪಡೆದ ಆಸ್ಟ್ರೇಲಿಯ ತಂಡ ಎರಡು ವಿಕೆಟ್ ಕಳೆದುಕೊಂಡಿದ್ದರೂ ಸುಲಭ ಜಯ ಸಾಧಿಸಿತ್ತು. ಜೋ ಬರ್ನ್ಸ್ ಔಟಾಗದೆ ಅರ್ಧಶತಕ ಗಳಿಸಿ 4 ಪಂದ್ಯಗಳ ಸರಣಿಯಲ್ಲಿ ಆಸೀಸ್ಗೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು.
► ಡೇ-ನೈಟ್ ಟೆಸ್ಟ್ಟ್ನಲ್ಲಿ ಭಾರತದ ಸಾಧನೆ
ಭಾರತ ಕ್ರಿಕೆಟ್ ತಂಡವು ಈ ತನಕ 4 ಟೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಜಯ ಸಾಧಿಸಿದೆ. 2020ರಲ್ಲಿ ಅಡಿಲೇಡ್ ಟೆಸ್ಟ್ನಲ್ಲಿ ಸೋಲುಂಡಿತ್ತು.
ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಪಿಂಕ್-ಬಾಲ್ ಟೆಸ್ಟ್ ಪಂದ್ಯಗಳನ್ನು ಭಾರತ ಜಯಿಸಿತ್ತು. ಆದರೆ ವಿದೇಶಿ ನೆಲದಲ್ಲಿ ಈ ತನಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ.
ಅಡಿಲೇಡ್ ಓವಲ್ನಲ್ಲಿ ಸ್ಪಿನ್ನರ್ಗಳು ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ಭಾರತ-ಆಸ್ಟ್ರೇಲಿಯ ನಡುವಿನ ಡೇ-ನೈಟ್ ಟೆಸ್ಟ್ಗಿಂತ ಮೊದಲು ಕ್ಯುರೇಟರ್ ಹೇಳಿದ್ದಾರೆ.
► ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಫಲಿತಾಂಶ
2019: ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಹಾಗೂ 46 ರನ್ ಜಯ(ಕೊಲ್ಕತ್ತಾ)
2020: ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ಗಳ ಸೋಲು(ಅಡಿಲೇಡ್)
2021: ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಜಯ(ಅಹಮದಾಬಾದ್)
2022: ಶ್ರೀಲಂಕಾ ವಿರುದ್ಧ 238 ರನ್ ಗೆಲುವು(ಬೆಂಗಳೂರು)
► ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ಸ್ಕೋರರ್ಗಳು
ವಿರಾಟ್ ಕೊಹ್ಲಿ-4 ಪಂದ್ಯಗಳಲ್ಲಿ 277 ರನ್, 46.16 ಸರಾಸರಿ
ರೋಹಿತ್ ಶರ್ಮಾ-ಮೂರು ಪಂದ್ಯಗಳಲ್ಲಿ 173 ರನ್, 43.25 ಸರಾಸರಿ
ಶ್ರೇಯಸ್ ಅಯ್ಯರ್-ಒಂದು ಪಂದ್ಯದಲ್ಲಿ 155 ರನ್, 79.50 ಸರಾಸರಿ
► ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳು
ಆರ್.ಅಶ್ವಿನ್-4 ಪಂದ್ಯಗಳಲ್ಲಿ 18 ವಿಕೆಟ್ಗಳು
ಅಕ್ಷರ್ ಪಟೇಲ್-2 ಪಂದ್ಯಗಳಲ್ಲಿ 14 ವಿಕೆಟ್ಗಳು
ಉಮೇಶ್ ಯಾದವ್-2 ಪಂದ್ಯಗಳಲ್ಲಿ 11 ವಿಕೆಟ್ಗಳು