ಬ್ರಿಸ್ಬೇನ್ನಲ್ಲಿ 2021ರ ಫಲಿತಾಂಶ ಪುನರಾವರ್ತಿಸಲಿದೆಯೇ ರೋಹಿತ್ ಬಳಗ?
ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ : ಅಡಿಲೇಡ್ನಲ್ಲಿ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು 10 ವಿಕೆಟ್ಗಳ ಅಂತರದಿಂದ ಸೋತ ನಂತರ ಭಾರತ ತಂಡವು ಶನಿವಾರದಿಂದ ಬ್ರಿಸ್ಬೇನ್ನ ಗಾಬಾ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದತ್ತ ತನ್ನ ಗಮನ ಹರಿಸಿದೆ.
ಪರ್ತ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 295 ರನ್ ಬೃಹತ್ ಅಂತರದಿಂದ ಜಯ ಸಾಧಿಸಿದ ಭಾರತ ತಂಡವು ಸರಣಿಯಲ್ಲಿ ತನ್ನ ಅಭಿಯಾನ ಆರಂಭಿಸಿತ್ತು. ಆದರೆ, ಆಸ್ಟ್ರೇಲಿಯ ತಂಡವು 2ನೇ ಪಂದ್ಯ ಜಯಿಸಿ ಸರಣಿಯನ್ನು ಡ್ರಾಗೊಳಿಸಿದೆ.
ಭಾರತ ತಂಡವು ಗಾಬಾ ಕ್ರೀಡಾಂಗಣದಲ್ಲಿ 2021ರ ಜನವರಿ 15ರಂದು ನಡೆದಿದ್ದ ಟೆಸ್ಟ್ ಪಂದ್ಯವನ್ನು ಜಯಿಸಿದ ಸಿಹಿ ನೆನಪು ಹೊಂದಿದ್ದರೂ ಬ್ರಿಸ್ಬೇನ್ನಲ್ಲಿ ಇದೀಗ ಆಸ್ಟ್ರೇಲಿಯ ಫೇವರಿಟ್ ತಂಡವಾಗಿ ಕಂಡುಬರುತ್ತಿದೆ.
ರಿಷಭ್ ಪಂತ್ ಗಳಿಸಿದ ಔಟಾಗದೆ 89 ರನ್ ನೆರವಿನಿಂದ 2021ರಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ತಂಡವು ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯ ತಂಡವನ್ನು 3 ವಿಕೆಟ್ಗಳ ಅಂತರದಿಂದ ಮಣಿಸಿತ್ತು. ಈ ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು. ಗಾಬಾ ಸ್ಟೇಡಿಯಮ್ನಲ್ಲಿ 33 ವರ್ಷಗಳಿಂದ ಆಸ್ಟ್ರೇಲಿಯ ತಂಡ ಕಾಯ್ದುಕೊಂಡಿದ್ದ ಅಜೇಯ ದಾಖಲೆಯನ್ನು ಭಾರತ ತಂಡವು ಮುರಿದಿತ್ತು.
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ನಂತರವೂ ಐದು ಪಂದ್ಯಗಳ ಸರಣಿಯು ಮುಂದುವರಿಯಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಈ ಪಂದ್ಯವು ಮಹತ್ವ ಪಡೆದಿದೆ. ಭಾರತ ತಂಡವು ಮತ್ತೊಂದು ಸೋಲು ಅನುಭವಿಸಿದರೆ, ಡಬ್ಲ್ಯುಟಿಸಿ ಫೈನಲ್ಗೆ ತಲುಪುವ ಅವಕಾಶ ಕೈಮೀರಿ ಹೋಗಲಿದೆ. ಲಾರ್ಡ್ಸ್ನಲ್ಲಿ ಮುಂದಿನ ವರ್ಷ ನಡೆಯಲಿರುವ ಫೈನಲ್ಸ್ಗೆ ಅರ್ಹತೆ ಪಡೆಯಲು ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಕೇವಲ ಒಂದು ಗೆಲುವಿನ ಅಗತ್ಯ ಬೀಳಲಿದೆ.
*ಬ್ರಿಸ್ಬೇನ್ನಲ್ಲಿ ಟೀಮ್ ಇಂಡಿಯಾದ ಟೆಸ್ಟ್ ದಾಖಲೆ
ಆಡಿರುವ ಪಂದ್ಯಗಳು: 7
ಗೆಲುವು:1
ಸೋಲು: 5
ಡ್ರಾ: 1
ಪಂದ್ಯ ಫಲಿತಾಂಶಗಳು:
1947 ನವೆಂಬರ್ 28: ಭಾರತಕ್ಕೆ ಇನಿಂಗ್ಸ್ ಹಾಗೂ 226 ರನ್ ಸೋಲು
1968 ಜನವರಿ 19: ಭಾರತ ತಂಡಕ್ಕೆ 39 ರನ್ ಸೋಲು
1977 ಡಿಸೆಂಬರ್ 2: ಭಾರತ ತಂಡಕ್ಕೆ 16 ರನ್ ಸೋಲು
1991 ನವೆಂಬರ್ 29: ಭಾರತ ತಂಡಕ್ಕೆ 10 ವಿಕೆಟ್ಗಳ ಸೋಲು
2003 ಡಿ.4: ಭಾರತ-ಆಸ್ಟ್ರೇಲಿಯ ಪಂದ್ಯ ಡ್ರಾ
2014 ಡಿಸೆಂಬರ್ 17: ಭಾರತ ತಂಡಕ್ಕೆ 4 ವಿಕೆಟ್ಗಳ ಸೋಲು
2021 ಜನವರಿ 15: ಭಾರತ ತಂಡಕ್ಕೆ 3 ವಿಕೆಟ್ಗಳ ಗೆಲುವು