4 ಗಂಟೆಗಳಲ್ಲಿ ಎರಡು ಬಾರಿ ಔಟಾದ ವಿಲಿಯಮ್ಸನ್
ಕೇನ್ ವಿಲಿಯಮ್ಸನ್ | PC : PTI
ಕ್ರೀಸ್ನಲ್ಲಿ ಅಂಟಿಕೊಂಡು ಆಡುವುದರಲ್ಲಿ ನಿಷ್ಣಾತರಾಗಿರುವ ಕೇನ್ ವಿಲಿಯಮ್ಸನ್ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ನ 3ನೇ ದಿನದಾಟದಲ್ಲಿ ಬ್ಯಾಟಿಂಗ್ನಲ್ಲಿ ಭಾರೀ ನಿರಾಶೆಗೊಳಿಸಿದರು.
ಶನಿವಾರ ಗಾಲೆ ಇಂಟರ್ನ್ಯಾಶನಲ್ ಸ್ಟೇಡಿಯಮ್ನಲ್ಲಿ ನಾಲ್ಕು ಗಂಟೆಗಳಲ್ಲಿ ಎರಡು ಬಾರಿ ವಿಕೆಟ್ ಕೈಚೆಲ್ಲಿದ್ದಾರೆ.
ವಿಲಿಯಮ್ಸನ್ ಬೆಳಗ್ಗೆ 10:25ರ ಸುಮಾರಿಗೆ ಮೊದಲಿಗೆ ಔಟಾದರು. 17ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಪಿನ್ನರ್ ಜಯಸೂರ್ಯ ಅವರು ವಿಲಿಯಮ್ಸನ್ ವಿಕೆಟ್ ಪಡೆದರು. ವಿಲಿಯಮ್ಸನ್ ಮೊದಲ ಇನಿಂಗ್ಸ್ನಲ್ಲಿ 53 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದರು.
ಕಿವೀಸ್ ಮೊದಲ ಇನಿಂಗ್ಸ್ನಲ್ಲಿ 88 ರನ್ಗೆ ಸರ್ವಪತನಗೊಂಡ ಕಾರಣ ಫಾಲೋ ಆನ್ಗೆ ಒಳಗಾಯಿತು.
ವಿಲಿಯಮ್ಸನ್ಗೆ ಮತ್ತೊಮ್ಮೆ ಕ್ರೀಸ್ಗೆ ಆಗಮಿಸುವ ಅವಕಾಶ ಲಭಿಸಿತು. 2ನೇ ಇನಿಂಗ್ಸ್ನಲ್ಲಿ ಡೆವೊನ್ ಕಾನ್ವೆ ಜೊತೆ 2ನೇ ವಿಕೆಟ್ಗೆ 97 ರನ್ ಜೊತೆಯಾಟದಲ್ಲಿ ಭಾಗಿಯಾದರು. ಈ ಇಬ್ಬರ ಜೊತೆಯಾಟವು ಕಿವೀಸ್ ತಂಡ ಇನಿಂಗ್ಸ್ ಸೋಲಿನಿಂದ ಪಾರಾಗುವ ವಿಶ್ವಾಸ ಮೂಡಿಸಿತ್ತು.
ಆದರೆ ಮಧ್ಯಾಹ್ನ 2:15ರ ಸುಮಾರಿಗೆ ವಿಲಿಯಮ್ಸನ್ ಇನಿಂಗ್ಸ್ಗೆ ತೆರೆ ಬಿತ್ತು. ಈ ಬಾರಿ ವಿಲಿಯಮ್ಸನ್ ಅವರು 46 ರನ್ ಗಳಿಸಿ ಆಫ್ ಸ್ಪಿನ್ನರ್ ನಿಶಾನ್ ಪೆರಿಸ್ಗೆ ವಿಕೆಟ್ ಒಪ್ಪಿಸಿದರು.
ಶ್ರೀಲಂಕಾ ತಂಡಕ್ಕೆ ಸರಣಿ ಗೆಲುವಿಗೆ ಇನ್ನು 5 ವಿಕೆಟ್ಗಳ ಅಗತ್ಯವಿದೆ. ಸ್ಪಿನ್ನರ್ಗಳಾದ ಜಯಸೂರ್ಯ ಹಾಗೂ ಪೆರಿಸ್ 3ನೇ ದಿನದಾಟದಲ್ಲಿ ಪ್ರಾಬಲ್ಯ ಮೆರೆದಿದ್ದು, ಒಟ್ಟು 13 ವಿಕೆಟ್ಗಳು ಪತನಗೊಂಡಿವೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್: 602/5 ಡಿಕ್ಲೇರ್
ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 88 ರನ್ಗೆ ಆಲೌಟ್
ನ್ಯೂಝಿಲ್ಯಾಂಡ್ 2ನೇ ಇನಿಂಗ್ಸ್: 199/5
(ಡೆವೊನ್ ಕಾನ್ವೆ 61, ಬ್ಲಂಡೆಲ್ ಔಟಾಗದೆ 47, ಕೇನ್ ವಿಲಿಯಮ್ಸನ್ 46,ಫಿಲಿಪ್ಸ್ ಔಟಾಗದೆ 32, ನಿಶಾನ್ ಪೆರಿಸ್ 3-91)