ವಿಂಬಲ್ಡನ್ ಚಾಂಪಿಯನ್ಶಿಪ್: ಸತತ 29ನೇ ಗೆಲುವು ದಾಖಲಿಸಿದ ಜೊಕೊವಿಕ್
Photo:PTI
ಲಂಡನ್: ಹಾಲಿ ಚಾಂಪಿಯನ್ ಹಾಗೂ ಸತತ ಐದನೇ ಪ್ರಶಸ್ತಿ ನಿರೀಕ್ಷೆಯಲ್ಲಿರುವ ನೊವಾಕ್ ಜೊಕೊವಿಕ್ ಅರ್ಜೆಂಟೀನದ ಪೆಡ್ರೊ ಕಚಿನ್ ವಿರುದ್ಧ ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಸತತ 29ನೇ ಗೆಲುವು ಸಂಪಾದಿಸಿದರು.
10 ವರ್ಷಗಳಿಂದ ಲಂಡನ್ನ ಸೆಂಟ್ರಲ್ ಕೋರ್ಟ್ನಲ್ಲಿ ಸೋಲನ್ನೇ ಕಾಣದ ಸರ್ಬಿಯದ ಆಟಗಾರ ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 68ನೇ ರ್ಯಾಂಕಿನ ಆಟಗಾರನನ್ನು 6-3, 6-3, 7-6(4) ಸೆಟ್ಗಳ ಅಂತರದಿಂದ ಸೋಲಿಸಿದರು. ಸೆಂಟರ್ ಕೋರ್ಟ್ನಲ್ಲಿ ಸತತ 40ನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರು.
ವಿಶ್ವದ ನಂ.2ನೇ ಆಟಗಾರ ಜೊಕೊವಿಕ್ ದಾಖಲೆಯ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ ಮೊದಲ ಪುರುಷ ಆಟಗಾರನಾಗುವ ಗುರಿ ಇಟ್ಟುಕೊಂಡಿದ್ದಾರೆ. ಜೊಕೊವಿಕ್ ಈ ಸಾಧನೆ ಮಾಡಿದರೆ ಆಸ್ಟ್ರೇಲಿಯದ ಮಾಜಿ ಆಟಗಾರ್ತಿ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
36ರ ಹರೆಯದ ಜೊಕೊವಿಕ್ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಏಳು ಬಾರಿ ಚಾಂಪಿಯನ್ ಅಗಿದ್ದು, ಇನ್ನೊಂದು ಪ್ರಶಸ್ತಿ ಜಯಿಸಿದರೆ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಬಹುದು. ಫೆಡರರ್ 8 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಜೊಕೊವಿಕ್ ಒಂದು ವೇಳೆ ಸತತ 5ನೇ ವಿಂಬಲ್ಡನ್ ಚಾಂಪಿಯನ್ಶಿಪ್ ಜಯಿಸಿದರೆ ಫೆಡರರ್ ಹಾಗೂ ಬ್ಯೋರ್ನ್ ಬೋರ್ಗ್ ಅವರ ಸಿಂಗಲ್ಸ್ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಲಿದ್ದಾರೆ.
2013ರಲ್ಲಿ ಜೊಕೊವಿಕ್ ಸೆಂಟರ್ ಕೋರ್ಟ್ನಲ್ಲಿ ಆ್ಯಂಡಿ ಮರ್ರೆ ವಿರುದ್ಧ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿ ಸೋತಿದ್ದರು.
ಜೊಕೊವಿಕ್ ಎರಡನೇ ಸುತ್ತಿನಲ್ಲಿ ಆಸೀಸ್ ಆಟಗಾರ ಜೋರ್ಡನ್ ಥಾಮ್ಸನ್ರನ್ನು ಎದುರಿಸಲಿದ್ದಾರೆ.
ಸೋಫಿಯಾ ಕೆನಿನ್ ಶುಭಾರಂಭ: ಮಹಿಳೆಯರ ಸಿಂಗಲ್ಸ್ ನಲ್ಲಿ ಕೊಕೊ ಗೌಫ್ರನ್ನು ಮೊದಲ ಸುತ್ತಿನಲ್ಲಿ ಸೋಲಿಸಿ ಶಾಕ್ ನೀಡಿರುವ ಸೋಫಿಯಾ ಕೆನಿನ್ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡಿದರು.
ಕೆನಿನ್ ಸದ್ಯ 128ನೇ ರ್ಯಾಂಕಿನಲ್ಲಿದ್ದರೂ ಕೂಡ ಮಾಜಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿದ್ದಾರೆ. ಮಾಸ್ಕೊದಲ್ಲಿ ಜನಿಸಿರುವ ಫ್ಲೋರಿಡಾದ ಆಟಗಾರ್ತಿ ಕೆನಿನ್ 6-4, 4-6, 6-2 ಸೆಟ್ಗಳ ಅಂತರದಿಂದ ಗೆಲುವು ದಾಖಲಿಸಿದರು.
ಏಳನೇ ಶ್ರೇಯಾಂಕದ ಗೌಫ್ ಕಠಿಣ ಸವಾಲು ಎದುರಿಸಿದರೂ ಇದು ಅವರ ಪಾಲಿಗೆ ಆಘಾತಕಾರಿ ಸೋಲಾಗಿದೆ.