ಮಹಿಳೆಯರ ಏಶ್ಯಕಪ್ ಟಿ20 ಟೂರ್ನಿ: 9ನೇ ಬಾರಿ ಭಾರತ ಫೈನಲ್ ಗೆ
ಸೆಮಿ ಫೈನಲ್ ನಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್ ಜಯ
PC : PTI
ಡಾಂಬುಲ್ಲಾ : ಶೆಫಾಲಿ ವರ್ಮಾ(ಔಟಾಗದೆ 26) ಹಾಗೂ ಸ್ಮತಿ ಮಂಧಾನ(ಔಟಾಗದೆ 55)ಅವರ ಭರ್ಜರಿ ಜೊತೆಯಾಟ, ರೇಣುಕಾ ಸಿಂಗ್(3-10) ಅವರ ಅಮೋಘ ಬೌಲಿಂಗ್ ನೆರವಿನಿಂದ ಭಾರತ ತಂಡ ಮಹಿಳೆಯರ ಏಶ್ಯಕಪ್-2024 ಟಿ20 ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್ನಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ 9ನೇ ಬಾರಿ ಫೈನಲ್ಗೆ ಪ್ರವೇಶಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 81 ರನ್ ಗುರಿ ಪಡೆದಿದ್ದ ಭಾರತ ತಂಡವು ಶೆಫಾಲಿ(ಔಟಾಗದೆ 26, 28 ಎಸೆತ, 2 ಬೌಂಡರಿ)ಹಾಗೂ ಸ್ಮತಿ(ಔಟಾಗದೆ 55, 39 ಎಸೆತ, 9 ಬೌಂಡರಿ,1 ಸಿಕ್ಸರ್)83 ರನ್ ಜೊತೆಯಾಟದ ನೆರವಿನಿಂದ 54 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಇದಕ್ಕೂ ಮೊದಲು ಮೂರು ವಿಕೆಟ್ ಗೊಂಚಲು ಪಡೆದಿರುವ ರಾಧಾ ಯಾದವ್(3-14) ಹಾಗೂ ರೇಣುಕಾ ಸಿಂಗ್(3-10) ಭಾರತ ತಂಡವು ಬಾಂಗ್ಲಾದೇಶ ತಂಡವನ್ನು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 80 ರನ್ಗೆ ನಿಯಂತ್ರಿಸುವಲ್ಲಿ ನೆರವಾದರು.
2018ರ ಚಾಂಪಿಯನ್ ಬಾಂಗ್ಲಾದೇಶವು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು. ಬೌಂಡರಿ ಗಳಿಸಲು ತಿಣುಕಾಡಿದ ಬಾಂಗ್ಲಾದೇಶದ ಆಟಗಾರ್ತಿಯರು ಸ್ಟ್ರೈಕನ್ನು ರೊಟೇಟ್ ಮಾಡಲು ಕಷ್ಟಪಟ್ಟರು. ನಿಗಾರ್ ಸುಲ್ತಾನ(32 ರನ್) ಹಾಗೂ ಶೊರ್ನಾ ಅಖ್ತರ್(ಔಟಾಗದೆ 19) ಮಾತ್ರ ಎರಡಂಕೆಯ ಸ್ಕೋರ್ ಗಳಿಸಿದರು.
ಸುಲಭ ಗುರಿ ಪಡೆದ ಹಾಲಿ ಚಾಂಪಿಯನ್ ಭಾರತದ ಪರ ಸ್ಮತಿ ಮಂಧಾನ ಬೌಂಡರಿಗಳ ಸುರಿಮಳೆಗೈದರು. ಭಾರತವು ಕೇವಲ 5 ಓವರ್ಗಳಲ್ಲಿ 40 ರನ್ ಗಳಿಸಲು ಕಾರಣರಾದರು. ಭಾರತವು 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 83 ರನ್ ಗಳಿಸಿತು.