ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ | ಜಪಾನ್ ವಿರುದ್ಧ ಜಯ ಸಾಧಿಸಿದ ಭಾರತ ಸೆಮಿ ಫೈನಲ್ಗೆ
PC : X \ @SanjayAgarw_IAS
ರಾಜ್ಗಿರ್ : ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದ ಭಾರತ ತಂಡವು ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದೆ.
ಈ ಮೂಲಕ 5 ಪಂದ್ಯಗಳಲ್ಲಿ 5ರಲ್ಲೂ ಜಯ ಸಾಧಿಸಿ 15 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತವು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಒಲಿಂಪಿಕ್ಸ್ನಲ್ಲಿ ಬೆಳ್ಳಿ ವಿಜೇತ ಚೀನಾ ತಂಡ(12 ಅಂಕ)ಎರಡನೇ ಸ್ಥಾನದಲ್ಲಿದೆ.
ಸೋಲಿನ ಹೊರತಾಗಿಯೂ 4ನೇ ಸ್ಥಾನ ಪಡೆದಿರುವ ಜಪಾನ್ ತಂಡ ಕೂಡ ನಾಕೌಟ್ ಗೆ ಪ್ರವೇಶಿಸಿದ್ದು, ಭಾರತ ಹಾಗೂ ಜಪಾನ್ ತಂಡಗಳು ಮಂಗಳವಾರ ಮತ್ತೊಮ್ಮೆ ಅಂತಿಮ-4ರ ಸುತ್ತಿನಲ್ಲಿ ಸೆಣಸಾಡಲಿವೆ.
ಪಂದ್ಯಾವಳಿಯ ಅಗ್ರ ಗೋಲ್ ಸ್ಕೋರರ್ ದೀಪಿಕಾ ಅವರು ಅವಳಿ ಗೋಲುಗಳನ್ನು(47ನೇ, 48ನೇ ನಿಮಿಷ) ದಾಖಲಿಸಿದರು. ಉಪ ನಾಯಕಿ ನವನೀತ್ ಕೌರ್ 37ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು.
ಭಾರತ ತಂಡವು ಜಪಾನ್ ವಿರುದ್ಧ ಆಡಿರುವ 7 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿದೆ. ಈ ವರ್ಷಾರಂಭದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಜಪಾನ್ ತಂಡ ಜಯ ಸಾಧಿಸಿತ್ತು.
ಭಾರತೀಯ ಹಾಕಿ ತಂಡವು ಮೈದಾನದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು, ಜಪಾನ್ ಗೆ ಹೋರಾಡಲು ಸ್ವಲ್ಪವೂ ಅವಕಾಶವನ್ನು ನೀಡಿಲ್ಲ. ಜಪಾನ್ ಮೊದಲಾರ್ಧದಲ್ಲಿ ಸ್ವಲ್ಪಮಟ್ಟಿಗೆ ಸರ್ಕಲ್ಗೆ ಪ್ರವೇಶಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಇದು ಸಾಧ್ಯವಾಗಲಿಲ್ಲ.
ಜಪಾನ್ ಗೋಲ್ಕೀಪರ್ ಯು ಕುಡೊ ಅತ್ಯಂತ ಹೆಚ್ಚು ತಾಳ್ಮೆ ಪ್ರದರ್ಶಿಸಿದ ಕಾರಣ ಭಾರತ ತಂಡಕ್ಕೆ ಮೊದಲಾರ್ಧದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅನುಭವಿ ಆಟಗಾರ್ತಿ ನವನೀತ್ ಕೌರ್ ಕೊನೆಗೂ 37ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು.
ಕೊನೆಯ ಕ್ವಾರ್ಟರ್ನಲ್ಲಿ ಭಾರತವು ಹಲವು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದುಕೊಂಡಿದ್ದರೂ 47 ಹಾಗೂ 48ನೇ ನಿಮಿಷಗಳಲ್ಲಿ ಎರಡು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ದೀಪಿಕಾ ಅವರು ಭಾರತವು 3-0 ಅಂತರದಿಂದ ಜಯ ಸಾಧಿಸಲು ನೆರವಾದರು. ಈ ಗೆಲುವಿನ ಮೂಲಕ ಭಾರತವು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಮತ್ತೊಂದು ಹೆಜ್ಜೆ ಇರಿಸಿದೆ.
ಚೀನಾ ತಂಡವು ಐದು ಪೆನಾಲ್ಟಿ ಕಾರ್ನರ್ ಗಳ ಪೈಕಿ 2ನ್ನು ಗೋಲಾಗಿ ಪರಿವರ್ತಿಸಿ ದಕ್ಷಿಣ ಕೊರಿಯಾ ತಂಡವನ್ನು 2-0 ಅಂತರದಿಂದ ಮಣಿಸಿದೆ. ಕೊರಿಯಾ ಸೆಮಿ ಫೈನಲ್ ರೇಸ್ನಿಂದ ಹೊರ ಬಿದ್ದಿದೆ.
ಥಾಯ್ಲೆಂಡ್ ತಂಡವನ್ನು 2-0 ಅಂತರದಿಂದ ಮಣಿಸಿರುವ ಮಲೇಶ್ಯ ತಂಡವು ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ. ಫೈನಲ್ನಲ್ಲಿ ಸ್ಥಾನ ಪಡೆಯಲು ಚೀನಾ ತಂಡದ ಸವಾಲನ್ನು ಎದುರಿಸಲಿದೆ.