ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ | ಗೆಲುವಿನ ಗೋಲು ಗಳಿಸಿದ ದೀಪಿಕಾ, ಪ್ರಶಸ್ತಿ ಉಳಿಸಿಕೊಂಡ ಭಾರತ
PC : NDTV
ರಾಜ್ಗಿರ್(ಬಿಹಾರ) : ಫೈನಲ್ ಪಂದ್ಯದಲ್ಲಿ ಚೀನಾ ತಂಡದ ವಿರುದ್ಧ 1-0 ಅಂತರದಿಂದ ಗೆಲುವು ದಾಖಲಿಸಿರುವ ಭಾರತದ ಮಹಿಳೆಯರ ಹಾಕಿ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಬುಧವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ದೀಪಿಕಾ ಅವರು ಮೂರನೇ ಕ್ವಾರ್ಟರ್ನಲ್ಲಿ 31ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು. ಈ ಮೂಲಕ ಭಾರತ ತಂಡವು ಸತತ ಎರಡನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಒಟ್ಟಾರೆ ಭಾರತ ತಂಡವು ಮೂರನೇ ಬಾರಿ ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಬಾಚಿಕೊಂಡಿದ್ದು, ಸ್ಪರ್ಧಾವಳಿಯ ಅತ್ಯಂತ ಯಶಸ್ವಿ ತಂಡ ದಕ್ಷಿಣ ಕೊರಿಯಾವನ್ನು ಸೇರಿಕೊಂಡಿದೆ.
2016ರಲ್ಲಿ ಸಿಂಗಾಪುರದಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದ ಭಾರತದ ಮಹಿಳೆಯರ ತಂಡವು 2023ರಲ್ಲಿ ರಾಂಚಿಯಲ್ಲಿ ಎರಡನೇ ಬಾರಿ ಪ್ರಶಸ್ತಿಯನ್ನು ಜಯಿಸಿತ್ತು. ಬುಧವಾರ ಬಿಹಾರದ ರಾಜ್ಗಿರ್ನಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
ಭಾರತ ತಂಡವು 2013 ಹಾಗೂ 2018ರಲ್ಲಿ ಎರಡು ಬಾರಿ ಬೆಳ್ಳಿ ಪದಕ ಜಯಿಸಿತ್ತು. 2010ರಲ್ಲಿ ಕಂಚು ಗೆದ್ದುಕೊಂಡಿತ್ತು.
ಮೂರನೇ ಕ್ವಾರ್ಟರ್ನಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ ತಂಡವು ಕೊನೆಗೂ ಗೋಲು ಗಳಿಸಿತು. ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ದೀಪಿಕಾ 31ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಫಾರ್ವರ್ಡ್ ಆಟಗಾರ್ತಿ ದೀಪಿಕಾಗೆ ಒಂದು ನಿಮಿಷದ ನಂತರ ಮುನ್ನಡೆಯನ್ನು ದ್ವಿಗುಣಗೊಳಿಸುವ ಅವಕಾಶ ಇತ್ತು. ಆದರೆ ಅವರು ಪೆನಾಲ್ಟಿ ಸ್ಟ್ರೋಕ್ ಅನ್ನು ತಪ್ಪಿಸಿಕೊಂಡರು. ಅಂತಿಮವಾಗಿ ಭಾರತ ತಂಡವು 1-0 ಮುನ್ನಡೆ ಪಡೆಯಿತು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ತಂಡ ಚೀನಾವು ಕೊನೆಯ ಕ್ವಾರ್ಟರ್ನಲ್ಲಿ ಸ್ಕೋರನ್ನು ಸಮಬಲಗೊಳಿಸುವ ನಿಟ್ಟಿನಲ್ಲಿ ಕಠಿಣ ಹೋರಾಟ ನೀಡಿತು. ಗೋಲ್ಕೀಪರ್ ಸವಿತಾ ಪುನಿಯಾ ನೇತೃತ್ವದ ಭಾರತದ ರಕ್ಷಣಾ ವಿಭಾಗವು ಚೀನಾಕ್ಕೆ ಗೋಲು ನಿರಾಕರಿಸಿತು.
ಭಾರತವು ಕೋಚ್ ಹರೇಂದರ್ ಸಿಂಗ್ ಮಾರ್ಗದರ್ಶನದಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದೆ.
ಭಾರತದ ಮಹಿಳೆಯರ ಹಾಕಿ ತಂಡವು ಮಂಗಳವಾರ ನಡೆದಿದ್ದ ಸೆಮಿ ಫೈನಲ್ನಲ್ಲಿ ಜಪಾನ್ ತಂಡವನ್ನು 2-0 ಅಂತರದಿಂದ ಸೋಲಿಸಿ ಫೈನಲ್ಗೆ ತಲುಪಿತ್ತು.
ಪಂದ್ಯಾವಳಿಯುದ್ದಕ್ಕೂ ಒಟ್ಟು 11 ಗೋಲುಗಳನ್ನು ಗಳಿಸಿರುವ ದೀಪಿಕಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.