ಮಹಿಳೆಯರ ಹಾಕಿ ಲೀಗ್ | 32 ಲಕ್ಷ ರೂ. ಮೌಲ್ಯ ಪಡೆದ ಭಾರತದ ಆಟಗಾರ್ತಿ ಉದಿತಾ
ಉದಿತಾ ದುಹಾನ್ | PC : PTI
ಹೊಸದಿಲ್ಲಿ : ಭಾರತದ ಡಿಫೆಂಡರ್ ಉದಿತಾ ದುಹಾನ್ ಅವರು ಹಾಕಿ ಇಂಡಿಯಾ ಮಹಿಳೆಯರ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ಹೆಚ್ಚು ಮೌಲ್ಯ ಪಡೆದಿದ್ದಾರೆ. ಮಂಗಳವಾರ ನಡೆದ ಹರಾಜಿನಲ್ಲಿ ಅವರು 32 ಲಕ್ಷ ರೂ. ಮೊತ್ತಕ್ಕೆ ಶ್ರಾಚಿ ಬೆಂಗಾಳ್ ಟೈಗರ್ಸ್ ತಂಡದ ಪಾಲಾಗಿದ್ದಾರೆ.
ನೆದರ್ಲ್ಯಾಂಡ್ಸ್ ಆಟಗಾರ್ತಿ, ಡ್ರ್ಯಾಗ್ ಫ್ಲಿಕ್ ಪರಿಣಿತೆ ಜಾನ್ಸನ್ ಅವರು ಎರಡನೇ ಅತಿ ಹೆಚ್ಚು ಮೊತ್ತಕ್ಕೆ(29 ಲಕ್ಷ ರೂ.)ಒಡಿಶಾ ವಾರಿಯರ್ಸ್ ತಂಡಕ್ಕೆ ಸೇರಿದ್ದಾರೆ.
ಭಾರತದ ಆಟಗಾರ್ತಿಯರಲ್ಲಿ ಲಾಲ್ರೆಮ್ಸಿಯಾಮಿ ಅವರು 25 ಲಕ್ಷ ರೂ. ಮೊತ್ತಕ್ಕೆ ಶ್ರಾಚಿ ಬೆಂಗಾಳ್ ಟೈಗರ್ಸ್ ಪಾಲಾದರೆ, ಸುನೆಲಿಟಾ ಟೊಪ್ಪೊ ಅವರನ್ನು 24 ಲಕ್ಷ ರೂ.ಗೆ ಡೆಲ್ಲಿ ಎಸ್ಐ ಪೈಪರ್ಸ್ ತಂಡವು ಸೇರಿಸಿಕೊಂಡಿದೆ. ಸಂಗೀತಾ ಕುಮಾರಿ 22 ಲಕ್ಷ ರೂ.ಗೆ ಡೆಲ್ಲಿ ತಂಡದ ಪಾಲಾದರು.
ಭಾರತದ ಅನುಭವಿ ಆಟಗಾರ್ತಿ ವಂದನಾ ಕಟಾರಿಯಾ 10.5 ಲಕ್ಷ ರೂ.ಗೆ ಬೆಂಗಾಳ್ ಟೈಗರ್ಸ್ಗೆ ಸೇರ್ಪಡೆಯಾದರು.
ಭಾರತ ಹಾಕಿ ತಂಡದ ನಾಯಕಿ ಸಲೀಮಾ ಟೆಟೆ(20 ಲಕ್ಷ ರೂ.), ಇಶಿಕಾ ಚೌಧರಿ(16 ಲಕ್ಷ ರೂ.)ಹಾಗೂ ನೇಹಾ ಗೋಯಲ್(10 ಲಕ್ಷ ರೂ.)ಅವರನ್ನು ಒಡಿಶಾ ವಾರಿಯರ್ಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಭಾರತ ತಂಡದ ಮಾಜಿ ನಾಯಕಿ ಸವಿತಾ(20 ಲಕ್ಷ ರೂ.), ಶರ್ಮಿಳಾ ದೇವಿ(10ಲಕ್ಷ ರೂ.)ಹಾಗೂ ನಿಕ್ಕಿ ಪ್ರಧಾನ್(12 ಲಕ್ಷ ರೂ.)ಅವರು ಸೂರ್ಮಾ ಹಾಕಿ ಕ್ಲಬ್ ಪರ ಆಡಲಿದ್ದಾರೆ.