ಬಾಂಗ್ಲಾದೇಶ ದಿಂದ ಮಹಿಳಾ ಟಿ20 ವಿಶ್ವಕಪ್ ಸ್ಥಳಾಂತರ?
PC : ICC
ದುಬೈ : ಬಾಂಗ್ಲಾದೇಶದ ರಾಜಕೀಯ ವಿಪ್ಲವದ ಹಿನ್ನೆಲೆಯಲ್ಲಿ, ಈ ವರ್ಷ ಆ ದೇಶದಲ್ಲಿ ನಡೆಯಬೇಕಾಗಿರುವ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬೇರೆ ದೇಶಕ್ಕೆ ವರ್ಗಾಯಿಸುವ ಸಾಧ್ಯತೆ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪರಿಶೀಲನೆ ನಡೆಸುತ್ತಿದೆ.
ಯುಎಇ, ಶ್ರೀಲಂಕಾ ಮತ್ತು ಭಾರತ ಸೇರಿದಂತೆ ಸಂಭಾವ್ಯ ನೂತನ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದ ಬಳಿಕ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಗೈದಿದ್ದಾರೆ. ಅಲ್ಲಿ ಪೊಲೀಸರ ಗೋಲಿಬಾರಿನಲ್ಲಿ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಬಾಂಗ್ಲಾದೇಶವು ಈಗ ಸೇನೆಯ ನಿಯಂತ್ರಣದಲ್ಲಿದ್ದು, ಅಸ್ತವ್ಯಸ್ತ ಪರಿಸ್ಥಿತಿ ನೆಲೆಸಿದೆ.
ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ಅಕ್ಟೋಬರ್ 3ರಿಮದ 20ರವರೆಗೆ ನಡೆಯಲು ನಿಗದಿಯಾಗಿದೆ. ಪಂದ್ಯಾವಳಿಯು ನಿರ್ವಿಘ್ನವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕಾಗಿ ಅದನ್ನು ಬೇರೆ ಸ್ಥಳಗಳಿಗೆ ವರ್ಗಾಯಿಸುವ ಬಗ್ಗೆ ಐಸಿಸಿ ಗಂಭೀರವಾಗಿ ಪರಿಶೀಲಿಸುತ್ತಿದೆ.
ಕ್ರಿಕೆಟ್ನ ಜಾಗತಿಕ ಆಡಳಿತ ಮಂಡಳಿಯು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಸ್ಥಳೀಯ ಭದ್ರತಾ ಸಂಸ್ಥೆಗಳು ಮತ್ತು ಸ್ವತಂತ್ರ ಭದ್ರತಾ ಸಲಹಾಕಾರರ ಜೊತೆಗೂಡಿ ಬಾಂಗ್ಲಾದೇಶದ ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇಟ್ಟಿದೆ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದರು.
‘‘ಪಂದ್ಯಾವಳಿಯಲ್ಲಿ ಭಾಗವಹಿಸುವವರ ಭದ್ರತೆಯು ನಮ್ಮ ಆದ್ಯತೆಯಾಗಿದೆ’’ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಭಾರತ ಸೇರಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ದೇಶಗಳ ಸರಕಾರಗಳು, ಬಾಂಗ್ಲಾದೇಶದ ಪ್ರಸಕ್ತ ರಾಜಕೀಯ ಅಶಾಂತಿಯ ಹಿನ್ನೆಲೆಯಲ್ಲಿ ಆ ದೇಶಕ್ಕೆ ಹೋಗದಂತೆ ತಮ್ಮ ನಾಗರಿಕರಿಗೆ ಸಲಹೆಗಳನ್ನು ನೀಡಿವೆ.
ಭಾರತ ಮತ್ತು ಶ್ರೀಲಂಕಾ ಸಮರ್ಥ ಪರ್ಯಾಯ ಸ್ಥಳಗಳಾದರೂ, ಕೆಲವು ಸಮಸ್ಯೆಗಳಿವೆ. ಶ್ರೀಲಂಕಾದಲ್ಲಿ ಅಕ್ಟೋಬರ್ ಮಳೆಗಾಲವಾಗಿದೆ. ಹಾಗಾಗಿ, ಅದು ಪಂದ್ಯಗಳನ್ನು ಹಾಳುಗೆಡವಬಹುದು. ಭಾರತದಲ್ಲಿ ನಡೆದರೆ, ಪಾಕಿಸ್ತಾನಿ ಆಟಗಾರರಿಗೆ ವೀಸಾ ಸಿಗುವುದು ಕಷ್ಟವಾಗಬಹುದು. ಯಾಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಳಸಿದೆ.