ವಿಶ್ವ ಚೆಸ್ ಚಾಂಪಿಯನ್ಶಿಪ್ | 11ನೇ ಪಂದ್ಯದಲ್ಲಿ ಗುಕೇಶ್ಗೆ ಜಯ; ಪ್ರಶಸ್ತಿಯತ್ತ ದೈತ್ಯ ಹೆಜ್ಜೆ
ಡಿ. ಗುಕೇಶ್ | PC : PTI
ಸಿಂಗಾಪುರ: ಸಿಂಗಾಪುರದಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್ಶಿಪ್ನ 11ನೇ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ರನ್ನು ಸೋಲಿಸುವುದರೊಂದಿಗೆ ಭಾರತದ ಯುವ ಗ್ರಾಂಡ್ಮಾಸ್ಟರ್ ಡಿ. ಗುಕೇಶ್ ರವಿವಾರ ಪ್ರಶಸ್ತಿಯತ್ತ ದೈತ್ಯ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಹಲವು ನಿರಂತರ ಡ್ರಾಗಳ ಬಳಿಕ, ಈಗ ಗುಕೇಶ್ 6-5 ಅಂಕಗಳಿಂದ ಮುಂದಿದ್ದಾರೆ.
14 ಪಂದ್ಯಗಳ ಪಂದ್ಯಾವಳಿಯಲ್ಲಿ ಇನ್ನು ಕೇವಲ ಮೂರು ಪಂದ್ಯಗಳು ಬಾಕಿಯಿದ್ದು, ಗುಕೇಶ್ ಸ್ಪಷ್ಟ ಮುನ್ನಡೆಯನ್ನು ಸಾಧಿಸಿದ್ದಾರೆ. ಇತಿಹಾಸ ಈಗ ಗುಕೇಶ್ ಪರವಾಗಿದೆ. ಆಧುನಿಕ ಚೆಸ್ನ ಇತಿಹಾಸದಲ್ಲಿ ಈವರೆಗೆ, 10ನೇ ಪಂದ್ಯದ ಬಳಿಕ 5-5ರಲ್ಲಿ ಸಮಬಲದಲ್ಲಿದ್ದ ಸ್ಪರ್ಧಿಯೊಬ್ಬ ವಿಜಯಿಯಾದ ಉದಾಹರಣೆಯಿಲ್ಲ. ಈಗ ಲಿರೆನ್ಗಿರುವ ಒಂದೇ ಒಂದು ಸಮಾಧಾನವೆಂದರೆ, ಕಳೆದ ವಿಶ್ವ ಚಾಂಪಿಯನ್ಶಿಪ್ನ 12ನೇ ಪಂದ್ಯದಲ್ಲಿ ಅವರು ರಶ್ಯದ ಇಯಾನ್ ನೆಪೊಮಿಯಾಚಿಯನ್ನು ಸೋಲಿಸಿರುವುದು.
ಕೇವಲ ಐದು ನಡೆಗಳ ಬಳಿಕ, ಗುಕೇಶ್ ಒಂದು ಗಂಟೆಗೂ ಹೆಚ್ಚಿನ ಸಮಯ ಮುನ್ನಡೆಯನ್ನು ಗಳಿಸಿದ್ದರು. ಜಿದ್ದಾಜಿದ್ದಿನ ಪಂದ್ಯಗಳಲ್ಲಿ ಇದರಿಂದ ಚೇತರಿಸಿಕೊಳ್ಳುವುದು ಎದುರಾಳಿಗೆ ಸುಲಭವಲ್ಲ.
‘‘ಒಂದನೇ ಪಂದ್ಯದ ಬಳಿಕ, ನಾನು ಮಾನಸಿಕ ಪ್ರತಿರೋಧವನ್ನು ತೋರಿಸಬೇಕಾಗಿತ್ತು. ಯಾಕೆಂದರೆ, ವಿಶ್ವ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಸೋಲುವುದು ಉತ್ತಮ ಸಂಗತಿಯಲ್ಲ. ಆದರೆ, ಒಮ್ಮೆ ತಿರುಗೇಟು ನೀಡಿದ ಬಳಿಕ ನಾನು ಉತ್ತಮ ಚೆಸ್ ಆಡಲು ಆರಂಭಿಸಿದೆ’’ ಎಂದು ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಕೇಶ್ ಹೇಳಿದರು.
ಮೊದಲ ಪಂದ್ಯವನ್ನು ಲಿರೆನ್ ಗೆದ್ದರೆ, ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಗುಕೇಶ್ ಯಶಸ್ವಿಯಾಗಿದ್ದರು. ಈ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡ ಗುಕೇಶ್ ಮೂರನೇ ಪಂದ್ಯದಲ್ಲಿ ಲಿರೆನ್ರನ್ನು ಸೋಲಿಸಿದರು. ಅಲ್ಲಿಗೆ ಇಬ್ಬರೂ ಸಮಬಲರಾದರು.
ಆದರೆ, ನಂತರದ ಏಳು ಪಂದ್ಯಗಳು ಡ್ರಾಗಳಲ್ಲಿ ಮುಕ್ತಾಯಗೊಂಡವು. ಈಗ 11ನೇ ಪಂದ್ಯವನ್ನು ಗೆಲ್ಲುವ ಮೂಲಕ ಗುಕೇಶ್ ಅಗಾಧ ಮುನ್ನಡೆಯನ್ನು ಗಳಿಸಿದ್ದಾರೆ.
ಹನ್ನೊಂದನೇ ಪಂದ್ಯದ ಓಪನಿಂಗ್ ಲೈನ್ಗೆ ನನ್ನನ್ನು ಸಿದ್ಧಪಡಿಸುವಲ್ಲಿ ನನ್ನ ತಂಡವು ಭಾರೀ ಶ್ರಮ ಪಟ್ಟಿದೆ ಎಂದು ಗುಕೇಶ್ ತಿಳಿಸಿದರು. ಇನ್ನು ಪಂದ್ಯಾವಳಿಯನ್ನು ಗೆಲ್ಲಲು ಗುಕೇಶ್ ಉಳಿದ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಸಾಕಾಗುತ್ತದೆ.