ಪೇಶಾವರದಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ನನ್ನತ್ತ ಮೊಳೆ ಎಸೆಯಲಾಗಿತ್ತು : ಇರ್ಫಾನ್ ಪಠಾಣ್
ವಿಶ್ವಕಪ್ ಕ್ರಿಕೆಟ್ 2023: ಪ್ರೇಕ್ಷಕರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪಾಕಿಸ್ತಾನ ದೂರು
Photo: Reuters
ಪುಣೆ: ಅಹಮದಾಬಾದ್ ನಲ್ಲಿ ಪ್ರೇಕ್ಷಕರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿರುವ ಬೆನ್ನಿಗೇ, ಪೇಶಾವರದಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಪಂದ್ಯವೊಂದರಲ್ಲಿ ನನ್ನತ್ತ ಮೊಳೆಯನ್ನು ಎಸೆಯಲಾಗಿತ್ತು ಎಂಬ ಸಂಗತಿಯನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಬಹಿರಂಗಗೊಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಅಕ್ಟೋಬರ್ 14, ಶನಿವಾರದಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ತನ್ನ ಏಳನೆಯ ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಈ ಸಂಬಂಧ ದೂರು ನೀಡಿತ್ತು.
ಇಂದು ಬಾಂಗ್ಲಾದೇಶ ತಂಡದೆದುರು ನಡೆಯುತ್ತಿರುವ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುವಾಗ ಇರ್ಫಾನ್ ಪಠಾಣ್ ಈ ಸಂಗತಿಯನ್ನು ಬಹಿರಂಗಗೊಳಿಸಿದ್ದು, ಪೆಶಾವರದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ ಆಡುವಾಗ ನನ್ನ ಕಣ್ಣಿನ ಕೆಳಗೆ ಮೊಳೆ ತಗುಲಿತ್ತು ಎಂದು ಹೇಳಿದ್ದಾರೆ.
“ನಾವು ಪೇಶಾವರದಲ್ಲಿ ಪಂದ್ಯವೊಂದನ್ನು ಆಡುವಾಗ ಅಭಿಮಾನಿಯೊಬ್ಬ ನನ್ನತ್ತ ತೂರಿದ ಮೊಳೆಯೊಂದು ನನ್ನ ಕಣ್ಣಿನ ಕೆಳಗೆ ತಗುಲಿತ್ತು. ಅದರಿಂದ ನಾನು ಗಂಭೀರವಾಗಿ ಗಾಯಗೊಂಡಿದ್ದೆ. ಇದರಿಂದ ಪಂದ್ಯವು 10 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತಾದರೂ, ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದುದರಿಂದ ನಾವು ಆ ಘಟನೆಯ ಕುರಿತು ಯಾವುದೇ ಗಮನ ನೀಡಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ.
ಇರ್ಫಾನ್ ಪಠಾಣ್ ಈ ಸಂಗತಿಯನ್ನು ಬಹಿರಂಗಪಡಿಸುತ್ತಿದ್ದಂತೆಯೆ, ಪಠಾಣ್ ಬೆಂಬಲಿಸಿ ಮಾಜಿ ಭಾರತೀಯ ಬ್ಯಾಟರ್ ಆಕಾಶ್ ಚೋಪ್ರಾ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪಠಾಣ್, ಅಹಮದಾಬಾದ್ ನಲ್ಲಿ ಭಾರತ ತಂಡದೆದುರು ನಡೆದ ಪಾಕಿಸ್ತಾನ ಪಂದ್ಯದ ಕುರಿತು ಕೇಳಿ ಬರುತ್ತಿರುವ ವ್ಯಾಖ್ಯಾನದ ಹಿನ್ನೆಲೆಯಲ್ಲಿ ನಾನು ಈ ಘಟನೆಯನ್ನು ಬೆಳಕಿಗೆ ತಂದಿದ್ದೇನೆ” ಎಂದು ಉತ್ತರಿಸಿದ್ದಾರೆ.
ಭಾರತ ತಂಡದೆದುರು ಪರಾಭವಗೊಂಡಿರುವ ಪಾಕಿಸ್ತಾನ ತಂಡವು, ಅಕ್ಟೋಬರ್ 20ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡದೆದುರು ನಡೆಯಲಿರುವ ಪಂದ್ಯದಲ್ಲಿ ಪುಟಿದೇಳುವ ತವಕದಲ್ಲಿದೆ.