ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನಕ್ಕೆ ಜಯ: ರಶೀದ್ ಖಾನ್ ಜೊತೆ ಹೆಜ್ಜೆ ಹಾಕಿದ ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್
Photo : twitter/IrfanPathan
ಚೆನ್ನೈ : ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಗೆಲುವು ಆಕಸ್ಮಿಕವಲ್ಲ ಎಂದು ಸಾಬೀತುಪಡಿಸಿದ್ದು, ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೂ ಸೋಲಿನ ಬರೆ ಎಳೆದಿದೆ. ಪಾಕಿಸ್ತಾನ ವಿರುದ್ಧ ಸುಲಭ ಜಯ ದಾಖಲಿಸಿರುವ ಅಫ್ಘಾನ್ ತಂಡ ಕ್ರಿಕೆಟ್ ವಿಶ್ವಕಪ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಏಕದಿನ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿ ಪಾಕಿಸ್ತಾನಕ್ಕೆ ಸೋಲುಣಿಸಿದ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆ ಮಾಡಿದೆ. ಅಫ್ಘಾನ್ ನ ಅಗ್ರ-ನಾಲ್ವರು ಬ್ಯಾಟರ್ಗಳು ಹಾಗೂ ನೂರ್ ಅಹ್ಮದ್ ಮೂರು ವಿಕೆಟ್ ಪಡೆದು ಗೆಲುವಿಗೆ ನೆರವಾಯಿತು.
ಈ ಸೋಲಿನೊಂದಿಗೆ ಪಾಕ್ನ ಸೆಮಿ ಫೈನಲ್ ಹಾದಿ ಕಠಿಣವಾಗಿದೆ. ಮುಂದಿನ ಸುತ್ತಿಗೇರಲು ಅದು ಉಳಿದ 4 ಪಂದ್ಯಗಳನ್ನು ಜಯಿಸಬೇಕಾಗಿದೆ.
ರಹಮಾನುಲ್ಲಾ ಗುರ್ಬಾಝ್(65 ರನ್), ಇಬ್ರಾಹೀಂ ಝದ್ರಾನ್(87 ರನ್) ಹಾಗೂ ರಹಮತ್ ಶಾ(ಔಟಾಗದೆ 77)ಬ್ಯಾಟಿಂಗ್ನಲ್ಲಿ ಮಿಂಚಿದ್ದಾರೆ. ಅಫ್ಘಾನ್ ಗೆಲುವಿನ ನಂತರ ಭಾರತದ ಕ್ರಿಕೆಟ್ ತಂಡದ ಸ್ಟಾರ್ ಇರ್ಫಾನ್ ಪಠಾಣ್ ಅವರು ಸ್ಪಿನ್ನರ್ ರಶೀದ್ ಖಾನ್ ಜೊತೆ ಡ್ಯಾನ್ಸ್ ಮಾಡಿದರು.
ಅಫ್ಘಾನ್ ತಂಡ ಏಕದಿನ ಕ್ರಿಕೆಟ್ನಲ್ಲಿ ಪಾಕ್ ವಿರುದ್ಧ ಮೊದಲ ಗೆಲುವು ದಾಖಲಿಸಿದ್ದಕ್ಕೆ ಅಫ್ಘಾನ್ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ನಾನು ಅಫ್ಘಾನಿಸ್ತಾನದಿಂದ ಬಂದಿದ್ದು, ಪಂದ್ಯ ಗೆದ್ದಿರುವುದು ಅದ್ಭುತ ಸಾಧನೆ. ವಿಶ್ವಕಪ್ ಗೆದ್ದಷ್ಟೇ ಖುಷಿಯಾಗಿದೆ. ನಮಗೆ ಬೆಂಬಲ ನೀಡಿರುವ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುವೆ. ಚೆನ್ನೈನ ಜನತೆಯು ನಮ್ಮ ತಂಡಕ್ಕೆ ಬೆಂಬಲ ನೀಡಿದ್ದಾರೆ ಎಂದು ಅಘ್ಘಾನ್ ಅಭಿಮಾನಿಯೊಬ್ಬ ಎಎನ್ಐಗೆ ತಿಳಿಸಿದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಇಬ್ರಾಹೀಂ ಝದ್ರಾನ್, ತನ್ನ ಪ್ರಶಸ್ತಿಯನ್ನು ತನ್ನ ದೇಶದ ಜನತೆ ಹಾಗೂ ಪಾಕಿಸ್ತಾನದಿಂದ ಗಡಿಪಾರಾಗಿರುವ ಅಫ್ಘಾನ್ ಜನರಿಗೆ ಸಮರ್ಪಿಸಿದರು.
Rasid khan fulfilled his promise and I fulfilled mine. Well done guys @ICC @rashidkhan_19 pic.twitter.com/DKPU0jWBz9
— Irfan Pathan (@IrfanPathan) October 23, 2023