ವಿಶ್ವಕಪ್: ನಾಳೆ ಆಸ್ಟ್ರೇಲಿಯ-ಇಂಗ್ಲೆಂಡ್ಗೆ ನಿರ್ಣಾಯಕ ಪಂದ್ಯ
Photo: cricketworldcup.com
ಹೊಸದಿಲ್ಲಿ: ಆ್ಯಶಸ್ ಸರಣಿಯ ಎದುರಾಳಿಗಳಾದ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಿರ್ಣಾಯಕ ಪಂದ್ಯವನ್ನಾಡಲಿವೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಇದೀಗ ಗೆಲುವಿನ ಲಯ ಕಂಡುಕೊಂಡಿದ್ದು ಸೆಮಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡ ಸತತ ಸೋಲಿನಿಂದ ಕಂಗೆಟ್ಟಿದೆ. ಟೂರ್ನಿ ಆರಂಭಕ್ಕೆ ಮೊದಲು ಇಂಗ್ಲೆಂಡ್ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ಗೆ ಸೋತಿರುವ ಇಂಗ್ಲೆಂಡ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಬೃಹತ್ ಗೆಲುವು ದಾಖಲಿಸಿ ಗೆಲುವಿನ ಹಳಿಗೆ ಮರಳಿತ್ತು. ಆದರೆ ಅಫ್ಘಾನಿಸ್ತಾನ ವಿರುದ್ದ ಆಘಾತಕಾರಿ ಸೋಲುನುಭವಿಸಿದ್ದ ಆಂಗ್ಲರು ಆ ನಂತರ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಭಾರತ ವಿರುದ್ಧ ಭಾರೀ ಅಂತರದ ಸೋಲು ಕಂಡರು. ಇಂಗ್ಲೆಂಡ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಜಯ ಸಾಧಿಸಿದೆ.
ಭಾರತ ವಿರುದ್ಧದ ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್ ವಿಭಾಗವು ಭಾರತವನ್ನು 9ಕ್ಕೆ 229 ರನ್ಗೆ ನಿಯಂತ್ರಿಸಿತ್ತು. ಡೇವಿಡ್ ವಿಲ್ಲಿ 3 ವಿಕೆಟ್ಗಳನ್ನು ಪಡೆದಿದ್ದರು. ಆದಿಲ್ ರಶೀದ್ ಹಾಗೂ ಕ್ರಿಸ್ ವೋಕ್ಸ್ ತಲಾ 2 ವಿಕೆಟ್ ಪಡೆದಿದ್ದರು. ಆದರೆ ಮುಹಮ್ಮದ್ ಶಮಿ(4/22) ಹಾಗೂ ಜಸ್ಟ್ರೀತ್ ಬುಮ್ರಾ(3-32)ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್ 100 ರನ್ನಿಂದ ಸೋತಿತ್ತು. ಸೆಮಿ ಫೈನಲ್ ತಲುಪುವ ಕನಸು ಭಗ್ನವಾಗಿತ್ತು. ಆಸ್ಟ್ರೇಲಿಯ ತಂಡ ಧರ್ಮಶಾಲಾದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ಗೆ ಸೋಲುಣಿಸಿತ್ತು.
ಭಾರತ ವಿರುದ್ಧ ಆಡಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿದ್ದ ಆಸ್ಟ್ರೇಲಿಯವು ಇದೀಗ ಸತತ 4 ಪಂದ್ಯಗಳಲ್ಲಿ ಜಯ ಸಾಧಿಸಿ 8 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಇಂಗ್ಲೆಂಡ್ ಸತತ ಸೋಲಿನಿಂದ ಕಂಗಲಾಗಿದ್ದು, ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದೆ. ಕಳೆದ 3 ಪಂದ್ಯಗಳಲ್ಲಿ 170 ಇಲ್ಲವೇ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.
ಎರಡು ಕ್ರಿಕೆಟ್ ದೈತ್ಯ ತಂಡಗಳ ನಡುವಿನ ಈ ಹಣಾಹಣಿಯು ಅತ್ಯಂತ ಮಹತ್ವ ಪಡೆದಿದೆ. ಎರಡೂ ತಂಡಗಳು ವಿಶೇಷ ಸವಾಲುಗಳನ್ನು ಎದುರಿಸುತ್ತಿವೆ. ಪ್ರಮುಖ ಆಟಗಾರರಾದ ಮಿಚೆಲ್ ಮಾರ್ಷ್(ವೈಯಕ್ತಿಕ ಕಾರಣ) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(ಗಾಯಾಳು)ಅವರ ಅಲಭ್ಯತೆಯಿಂದಾಗಿ ಆಸ್ಟ್ರೇಲಿಯ ಬದಲಿ ಆಟಗಾರರನ್ನು ಆಯ್ಕೆ ಮಾಡಲು ಬಯಸಿದೆ. ಕ್ಯಾಮರೂನ್ ಗ್ರೀನ್ ಹಾಗೂ ಮಾರ್ಕಸ್ ಸ್ಟೋನಿಸ್ ಈ ಇಬ್ಬರ ಸ್ಥಾನ ತುಂಬುವ ನಿರೀಕ್ಷೆ ಇದೆ.
ಗೆಲುವಿಗಾಗಿ ಹಾತೊರೆಯುತ್ತಿರುವ ಇಂಗ್ಲೆಂಡ್ ವಿಭಿನ್ನ ಸಂಯೋಜನೆಗಳ ಪ್ರಯೋಗ ಮಾಡುತ್ತಿದೆ. ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವಕಪ್ನ ಉದ್ಘಾಟನಾ ಪಂದ್ಯ ಆಡಿರುವ ಕ್ರೀಡಾಂಗಣಕ್ಕೆ ವಾಪಸಾಗಿರುವ ಇಂಗ್ಲೆಂಡ್ ಆಡುವ 11ರ ಬಳಗದಲ್ಲಿ ಮತ್ತೊಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ಹ್ಯಾರಿ ಬ್ರೂಕ್ ಪುನರಾಗಮನ ಮಾಡುವ ನಿರೀಕ್ಷೆ ಇದೆ. ಗಾಯಗೊಂಡಿರುವ ರೀಸ್ ಟೋಪ್ಲೆ ಬದಲಿಗೆ ವೇಗದ ಬೌಲರ್ ಬ್ರೈಡನ್ ಕಾರ್ಸ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಇಂಗ್ಲೆಂಡ್ನ ವಿಶ್ವಕಪ್ನ ಅಭಿಯಾನ ಡೋಲಾಯಮಾನವಾಗಿದ್ದು, 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಪಡೆಯುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಳ್ಳಲು ಆಸ್ಟ್ರೇಲಿಯ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ 50 ಓವರ್ಗಳ ಟೂರ್ನಮೆಂಟ್ನಲ್ಲಿ ವಿಶ್ವಕಪ್ನಲ್ಲಿ ಅಗ್ರ-7 ತಂಡಗಳು ಮಾತ್ರ ಸ್ಥಾನ ಪಡೆಯಲಿವೆ.
ಐತಿಹಾಸಿಕವಾಗಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯ ವಿರುದ್ಧ ಆಡಿರುವ 155 ಏಕದಿನ ಪಂದ್ಯಗಳಲ್ಲಿ 87 ಬಾರಿ ಸೋಲುಂಡಿದೆ. ವಿಶ್ವಕಪ್ ಮುಖಾಮುಖಿಯಲ್ಲಿ 9 ಪಂದ್ಯಗಳಲ್ಲಿ ಆರು ಬಾರಿ ಸೋತಿದೆ.
ಇತ್ತೀಚೆಗಿನ ಪ್ರದರ್ಶನದಲ್ಲಿ ಆಸ್ಟ್ರೇಲಿಯವು ಸತತ ಮೂರು ಬಾರಿ 350 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ, ಇಂಗ್ಲೆಂಡ್ ಪರದಾಟ ನಡೆಸುತ್ತಿದೆ. ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಟೂರ್ನಮೆಂಟ್ನಲ್ಲಿ ಆಸ್ಟ್ರೇಲಿಯ ಗಳಿಸಿರುವ 5 ಶತಕಗಳ ಪೈಕಿ 2 ಶತಕ ವಾರ್ನರ್ ಬ್ಯಾಟ್ನಿಂದ ಹೊರಹೊಮ್ಮಿದೆ. ಇನ್ನೊಂದೆಡೆ ಇಂಗ್ಲೆಂಡ್ ಟೂರ್ನಿಯಲ್ಲಿ ಕೇವಲ 1 ಶತಕ ಗಳಿಸಿದೆ. ಡೇವಿಡ್ ಮಲನ್ ಬಾಂಗ್ಲಾ ವಿರುದ್ಧ ಇಂಗ್ಲೆಂಡ್ ಪರ ಏಕೈಕ ಶತಕ ಗಳಿಸಿದ್ದರು. ಸ್ಥಿರ ಪ್ರದರ್ಶನ ನೀಡುತ್ತಿರುವ ಮಲನ್ 6 ಪಂದ್ಯಗಳಲ್ಲಿ ಒಟ್ಟು 236 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯವು 61 ಸಿಕ್ಸರ್ಗಳನ್ನು ಸಿಡಿಸಿದರೆ, ಇಂಗ್ಲೆಂಡ್ 27 ಸಿಕ್ಸರ್ ಬಾರಿಸಿದೆ. ಇದು ಆಸೀಸ್ನ ಬ್ಯಾಟಿಂಗ್ ಶಕ್ತಿಯನ್ನು ತೋರಿಸುತ್ತಿದೆ. ಇಂಗ್ಲೆಂಡ್ ತಂಡವು ಬೌಲಿಂಗ್ ವಿಭಾಗವನ್ನು ಹೆಚ್ಚು ನೆಚ್ಚಿಕೊಂಡಿದೆ. ಇಂಗ್ಲೆಂಡ್ ಬೌಲರ್ಗಳು 47 ವಿಕೆಟ್ಗಳನ್ನು ಕಬಳಿಸಿದ್ದರೆ, ಆಸ್ಟ್ರೇಲಿಯನ್ನರು 36 ವಿಕೆಟ್ ಪಡೆದಿದ್ದಾರೆ.
ತಲೆಗೆ ಆಗಿರುವ ಗಾಯದಿಂದ ಚೇತರಿಸಿಕೊಂಡು ವಾಪಸಾಗಿದ್ದ ಟ್ರಾವಿಸ್ ಹೆಡ್ ನ್ಯೂಝಿಲ್ಯಾಂಡ್ ವಿರುದ್ಧ ಶತಕ ಗಳಿಸಿದ್ದರು. ಹೆಡ್ ಮರಳಿಕೆಯಿಂದ ಆಸ್ಟ್ರೇಲಿಯದ ಬ್ಯಾಟಿಂಗ್ ಸರದಿಯು ಮತ್ತಷ್ಟು ಗಟ್ಟಿಯಾಗಿದೆ. ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೇನ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ರಿಂದ ತೆರವಾದ ಸ್ಥಾನ ತುಂಬುವುದು ಮಾರ್ಕಸ್ ಸ್ಟೋನಿಸ್ಗೆ ದೊಡ್ಡ ಸವಾಲಾಗಿದೆ. ಕ್ಯಾಮರೂನ್ ಗ್ರೀನ್ಗೆ ತಮ್ಮ ಶಕ್ತಿ ಪ್ರದರ್ಶಿಸಲು ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ.
ವಿಶ್ವಕಪ್ ಅಂತ್ಯಕ್ಕೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿರುವ ಡೇವಿಡ್ ವಿಲ್ಲಿ ತನಗೆ ಲಭಿಸಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ. ಮಾರ್ಕ್ ವುಡ್, ಕ್ರಿಸ್ ವೋಕ್ಸ್ ಹಾಗೂ ಸ್ಪಿನ್ನರ್ ಆದಿಲ್ ರಶೀದ್ ಮೂಲಕ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡುವ ಉದ್ದೇಶ ಹೊಂದಿದೆ.
ಅಹ್ಮದಾಬಾದ್ ಸ್ಟೇಡಿಯಮ್ನಲ್ಲಿ ರನ್ ಚೇಸ್ ಮಾಡುವ ತಂಡ ಹೆಚ್ಚು ಬಾರಿ ಮೇಲುಗೈ ಪಡೆದಿದೆ. ಇಬ್ಬನಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿರುವ ಕಾರಣ ಟಾಸ್ ನಿರ್ಣಾಯಕವಾಗಿದ್ದು ತಂಡಗಳು ಮೊದಲಿಗೆ ಬೌಲಿಂಗ್ ಆಯ್ದುಕೊಳ್ಳಲು ಆದ್ಯತೆ ನೀಡಬಹುದು.