ವಿಶ್ವಕಪ್ ಅರ್ಹತಾ ಪಂದ್ಯ: ಅಮೆರಿಕ ವಿರುದ್ಧ ಝಿಂಬಾಬ್ವೆಗೆ ದಾಖಲೆಯ ಜಯ
ಹರಾರೆ: ನಾಯಕ ಸಿಯಾನ್ ವಿಲಿಯಮ್ಸ್ ಶತಕ(174 ರನ್, 101 ಎಸೆತ)ಹಾಗೂ ಆರಂಭಿಕ ಬ್ಯಾಟರ್ ಜಾಯ್ಲಾರ್ಡ್ ಗಂಬಿ(78 ರನ್, 103 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ ಝಿಂಬಾಬ್ವೆ ತಂಡ ಅಮೆರಿಕ ತಂಡವನ್ನು ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ನ 17ನೇ ಪಂದ್ಯದಲ್ಲಿ 304 ರನ್ ಅಂತರದಿಂದ ಮಣಿಸಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 2ನೇ ಅತ್ಯಂತ ದೊಡ್ಡ ಅಂತರದ ರನ್ನಿಂದ ಗೆಲುವು ದಾಖಲಿಸಿದೆ. ಭಾರತ ಈ ವರ್ಷಾರಂಭದಲ್ಲಿ ತಿರುವನಂತಪುರದಲ್ಲಿ ಶ್ರೀಲಂಕಾವನ್ನು 317 ರನ್ ಅಂತರದಿಂದ ಸೋಲಿಸಿ ಏಕದಿನ ಕ್ರಿಕೆಟ್ನಲ್ಲಿ ಅತಿದೊಡ್ಡ ಅಂತರದಿಂದ ಜಯ ದಾಖಲಿಸಿರುವ ಮೊದಲ ತಂಡ ಎನಿಸಿಕೊಂಡಿತ್ತು.
ಸೋಮವಾರ ಗೆಲ್ಲಲು 409 ರನ್ ಗುರಿ ಪಡೆದ ಅಮೆರಿಕ ತಂಡ 25.1 ಓವರ್ ಗಳಲ್ಲಿ ಕೇವಲ 104 ರನ್ ಗೆ ಆಲೌಟಾಯಿತು. ರಿಚರ್ಡ್ ಗರಾವ(2-25) ಹಾಗೂ ಸಿಕಂದರ್ ರಝಾ(2-15)ತಲಾ ಎರಡು ವಿಕೆಟ್ಗಳನ್ನು ಪಡೆದರು. ಝಿಂಬಾಬ್ವೆ ಎ ಗುಂಪಿನಲ್ಲಿ ಸತತ 4ನೇ ಗೆಲುವು ದಾಖಲಿಸಿತು.
ಅಮೆರಿಕದ ಪರ ಅಭಿಷೇಕ್ ಪರಾಡ್ಕರ್(24 ರನ್,31 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆತಿಥೇಯರು 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 408 ರನ್ ಗಳಿಸಿದರು. ಝಿಂಬಾಬ್ವೆ ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ
ಗರಿಷ್ಠ ಸ್ಕೋರ್ ಗಳಿಸಿತು. ವಿಲಿಯಮ್ಸ್ ಹಾಗೂ ಗಂಬಿ
2ನೇ ವಿಕೆಟ್ ಗೆ 160 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ವಿಲಿಯಮ್ಸ್ ಅವರು ಸಿಕಂದರ್ ರಝಾ ಹಾಗೂ ಬರ್ಲ್ ಜೊತೆಗೆ 3ನೇ ಹಾಗೂ 4ನೇ ವಿಕೆಟ್ ಜೊತೆಯಾಟದಲ್ಲಿ ಕ್ರಮವಾಗಿ 88 ಹಾಗೂ 81 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ ಹಿಗ್ಗಿಸಿದರು.