ವಿಶ್ವಕಪ್ ಟಿ20 ಕ್ರಿಕೆಟ್ | ಸೂಪರ್-8ಕ್ಕೆ ಲಗ್ಗೆಯಿಟ್ಟ ಅಮೆರಿಕ ; ಪಾಕಿಸ್ತಾನ ಔಟ್
PC : .timesnownews
ಫ್ಲೋರಿಡಾ : ಆತಿಥೇಯ ಅಮೆರಿಕ ಹಾಗೂ ಐರ್ಲ್ಯಾಂಡ್ ನಡುವೆ ಶುಕ್ರವಾರ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ತಂಡ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡ ಸೂಪರ್-8 ರೇಸ್ನಿಂದ ಹೊರಬಿದ್ದಿದೆ.
ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಅಮೆರಿಕ ಕ್ರಿಕೆಟ್ ತಂಡ ಒಟ್ಟು 5 ಅಂಕದೊಂದಿಗೆ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಎ ಗುಂಪಿನಿಂದ ಭಾರತವು ಈಗಾಗಲೇ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಅಮೆರಿಕ ತನ್ನ ಚೊಚ್ಚಲ ವಿಶ್ವಕಪ್ನಲ್ಲಿ ಅಂತಿಮ-8ರ ಹಂತ ತಲುಪಿದ ಮೊದಲ ತಂಡ ಎನಿಸಿಕೊಂಡು ಇತಿಹಾಸ ನಿರ್ಮಿಸಿದೆ.
ಅಮೆರಿಕ ಮುಂದಿನ ಸುತ್ತಿಗೇರಿದ ಕಾರಣ ಫ್ಲೋರಿಡಾದಲ್ಲಿ ನಿಗದಿಯಾಗಿರುವ ಭಾರತ-ಕೆನಡಾ(ಜೂ.15)ಹಾಗೂ ಪಾಕಿಸ್ತಾನ-ಐರ್ಲ್ಯಾಂಡ್(ಜೂ.16)ನಡುವಿನ ಪಂದ್ಯವು ಮಹತ್ವ ಕಳೆದುಕೊಂಡಿವೆ.
ಸದ್ಯ ಅಮೆರಿಕ 4 ಪಂದ್ಯಗಳಲ್ಲಿ 5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಐರ್ಲ್ಯಾಂಡ್ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 3 ಪಂದ್ಯಗಳಲ್ಲಿ 1ರಲ್ಲಿ ಜಯ ಸಾಧಿಸಿರುವ ಪಾಕ್ 3ನೇ ಸ್ಥಾನದಲ್ಲಿದೆ.
ಸತತ 3 ದಿನಗಳಿಂದ ಪ್ಲೋರಿಡಾದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ. ಗುರುವಾರ ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರವಾಹ ಕಂಡುಬಂದಿದೆ.