ವಿಶ್ವಕಪ್: ಬಾಂಗ್ಲಾ ವಿರುದ್ಧ ಗೆದ್ದರೂ ಭಾರತ ಸೆಮೀಸ್ ತಲುಪಿಲ್ಲ ಏಕೆ?
PC: x.com/Ashutosh_Das7
ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8 ಹಂತದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 50 ರನ್ ಗಳ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಗೆಲುವು ಸಂಪಾದಿಸಿದೆ. ಟೂರ್ನಿಯಲ್ಲಿ ಅಜೇಯ ಅಭಿಯಾನವನ್ನು ಭಾರತ ಮುಂದುವರಿಸಿದ್ದರೂ, ಇನ್ನೂ ಏಕೆ ಸೆಮಿಫೈನಲ್ ಗೆ ಅರ್ಹತೆ ಪಡೆದಿಲ್ಲ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.
ಟೂರ್ನಿಯ ಸೂಪರ್ 8 ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ 4 ಅಂಕಗಳನ್ನು ಹೊಂದಿದ್ದು, 2.424 ನಿವ್ವಳ ರನ್ ರೇಟ್ ಹೊಂದಿದೆ. ಗುಂಪಿನಲ್ಲಿರುವ ಇತರ ತಂಡಗಳೆಂದರೆ ಆಸ್ಟ್ರೇಲಿಯಾ (ಒಂದು ಪಂದ್ಯದಿಂದ 2 ಅಂಕ. ನಿವ್ವಳ ರನ್ ರೇಟ್ 2.471), ಅಫ್ಘಾನಿಸ್ತಾನ (1 ಪಂದ್ಯ 0 ಅಂಕ, ನಿವ್ವಳ ರನ್ ರೇಟ್ ಮೈನಸ್ 2.350) ಮತ್ತು ಬಾಂಗ್ಲಾದೇಶ (2 ಪಂದ್ಯ 0 ಅಂಕ. ರನ್ ರೇಟ್ ಮೈನಸ್ 2.489).
ಒಂದು ವೇಳೆ ಅಫ್ಘಾನಿಸ್ತಾನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದರೆ, ಅಫ್ಘಾನಿಸ್ತಾನ ತಂಡ ಬಾಂಗ್ಲಾ ವಿರುದ್ಧವೂ ಗೆದ್ದರೆ, ಮೂರು ತಂಡಗಳು ತಲಾ ನಾಲ್ಕು ಅಂಕಗಳನ್ನು ಪಡೆದಂತಾಗುತ್ತದೆ. ಆಗ ನಿವ್ವಳ ರನ್ ರೇಟ್ ಗಣನೆಗೆ ಬರುತ್ತದೆ ಹಾಗೂ ಎರಡು ಅಗ್ರ ತಂಡಗಳು ಸೆಮಿಫೈನಲ್ ತಲುಪುತ್ತವೆ. ಈ ಕಾರಣದಿಂದ ಉತ್ತಮ ರನ್ ರೇಟ್ ಹೊಂದಿರುವ ಭಾರತ ಅಂತಿಮ ನಾಲ್ಕರ ಘಟ್ಟ ತಲುಪುವ ಸಾಧ್ಯತೆಗಳು ನಿಚ್ಚಳವಾಗಿದ್ದರೂ, ಇನ್ನೂ ಸೆಮಿಫೈನಲ್ ಸ್ಥಾನ ಖಾತರಿಯಾಗಿಲ್ಲ.
ಗುಂಪಿನಲ್ಲಿ ಅಜೇಯವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ಸೋಮವಾರ ಸೆಂಟ್ ಲೂಸಿಯಾದಲ್ಲಿ ಪರಸ್ಪರ ಸೆಣೆಸಲಿವೆ.