ವಿಶ್ವದ ನಂ.1 ಆಟಗಾರ್ತಿ ಸಬೆಲೆಂಕಾಗೆ ಫೈನಲ್ನಲ್ಲಿ ಸೋಲು | ರಶ್ಯದ ಆಂಡ್ರೀವಾ ಮುಡಿಗೆ ಸಿಂಗಲ್ಸ್ ಕಿರೀಟ

ಆಂಡ್ರೀವಾ | PC : X
ಕ್ಯಾಲಿಫೋರ್ನಿಯಾ: ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಲಬೆಂಕಾರನ್ನು ಸೋಲಿಸಿ ಆಘಾತ ನೀಡಿದ 17ರ ವಯಸ್ಸಿನ ಮಿರ್ರಾ ಆಂಡ್ರೀವಾ ಎರಡನೇ ಬಾರಿ ಡಬ್ಲ್ಯುಟಿಎ-1000 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ರವಿವಾರ ನಡೆದ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಬೆಲಾರುಸ್ ಆಟಗಾರ್ತಿಯನ್ನು 2-6, 6-4, 6-3 ಸೆಟ್ ಗಳ ಅಂತರದಿಂದ ಮಣಿಸಿದ ರಶ್ಯದ ಆಟಗಾರ್ತಿ ಆಂಡ್ರೀವಾ ಈ ಐತಿಹಾಸಿಕ ಸಾಧನೆ ಮಾಡಿದರು.
ಆಂಡ್ರೀವಾ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ 26 ವರ್ಷಗಳ ನಂತರ ಪ್ರಶಸ್ತಿ ಜಯಿಸಿರುವ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. 1999ರಲ್ಲಿ ಅಮೆರಿಕ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಇಂಡಿಯನ್ ವೆಲ್ಸ್ ಟೂರ್ನಿ ಗೆದ್ದಿರುವ ಕಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದರು.
18 ವರ್ಷ ತುಂಬುವ ಮೊದಲೇ ಇಂಡಿಯನ್ ವೆಲ್ಸ್ ಟೂರ್ನಿಯ ಫೈನಲ್ ತಲುಪಿದ 5ನೇ ಆಟಗಾರ್ತಿ ಎನಿಸಿಕೊಂಡಿದ್ದ ಆ್ಯಂಡ್ರೀವಾ ಅವರು ಸೆಲೆಸ್,ಹಿಂಗಿಸ್, ಸೆರೆನಾ ಹಾಗೂ ಕ್ಲಿಸ್ಟರ್ಸ್ ಸಾಧನೆಯನ್ನು ಸರಿಗಟ್ಟಿದರು.
1990ರ ನಂತರ ಏಕೈಕ ಡಬ್ಲ್ಯುಟಿಎ ಸ್ಪರ್ಧೆಯಲ್ಲಿ ವಿಶ್ವದ ನಂ.1 ಹಾಗೂ ನಂ.2 ಆಟಗಾರ್ತಿಯರನ್ನು ಮಣಿಸಿರುವ ಯುವ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಸ್ಟೆಫಿಗ್ರಾಫ್ ಹಾಗೂ ಸೆರೆನಾ ನಂತರ ಹಿಂದಿನ 40 ವರ್ಷಗಳಲ್ಲಿ ಮೊದಲ ಬಾರಿ ಒಂದೇ ಟೂರ್ನಿಯಲ್ಲಿ ವಿಶ್ವದ ನಂ.1 ಹಾಗೂ ನಂ. 2 ಆಟಗಾರ್ತಿಯರನ್ನು ಸೋಲಿಸಿದ 3ನೇ ಕಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದಾರೆ.
ಕಳೆದ ತಿಂಗಳು ದುಬೈನಲ್ಲಿ 1000-ಮಟ್ಟದ ಟೂರ್ನಿಯನ್ನು ಜಯಿಸಿರುವ ಕಿರಿಯ ವಯಸ್ಸಿನ ಆಟಗಾರ್ತಿ ಎನಿಸಿಕೊಂಡಿದ್ದ ಆಂಡ್ರೀವಾ ಇದೀಗ ಸತತ 2ನೇ ಡಬ್ಲ್ಯುಟಿಎ-1000 ಪ್ರಶಸ್ತಿ ಗೆದ್ದುಕೊಂಡು ಮಾರ್ಟಿನಾ ಹಿಂಗಿಸ್ ದಾಖಲೆ ಸರಿಗಟ್ಟಿದ್ದಾರೆ. ಹಿಂಗಿಸ್ 1997ರಲ್ಲಿ ಈ ಸಾಧನೆ ಮಾಡಿದ್ದರು. ಆಂಡ್ರೀವಾ ಅವರು ಸಬಲೆಂಕಾ ವಿರುದ್ಧದ ಈ ಹಿಂದೆ ಎದುರಿಸಿದ್ದ ಸವಾಲುಗಳನ್ನು ಮೀರಿ ನಿಂತರು. ಈ ಗೆಲುವಿನ ಮೂಲಕ ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯುಟಿಎ ರ್ಯಾಂಕಿಂಗ್ ನಲ್ಲಿ ಆರನೇ ಸ್ಥಾನ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು.
ಡಬ್ಲ್ಯುಟಿಎ ಫೈನಲ್ನಲ್ಲಿ ಮೊದಲ ಸೆಟ್ ಸೋತ ನಂತರ ವಿಶ್ವದ ನಂ.1 ಆಟಗಾರ್ತಿಯನ್ನು ಮಣಿಸಿದ ಮೂರನೇ ಕಿರಿಯ ಆಟಗಾರ್ತಿ ಎಂಬ ಕೀರ್ತಿಗೂ ಆಂಡ್ರೀವಾ ಪಾತ್ರರಾದರು.
ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡ ನಂತರ ಆ್ಯಂಡ್ರೀವಾ ಕೊನೆಯ ಸೆಟ್ ನಲ್ಲಿ ಮೂರು ಬಾರಿ ಸಬಲೆಂಕಾರ ಸರ್ವ್ ತುಂಡರಿಸಿದರು. ಆಂಡ್ರೀವಾ 2025ರ ಋತುವಿನಲ್ಲಿ ಡಬ್ಲ್ಯುಟಿಎ ಟೂರ್ನಲ್ಲಿ ಆಡಿರುವ 22 ಪಂದ್ಯಗಳ ಪೈಕಿ 19ರಲ್ಲಿ ಜಯ ಸಾಧಿಸಿ ಅತ್ಯಂತ ಯಶಸ್ವಿ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.
‘‘ಕೊನೆಯ ತನಕ ಹೋರಾಡಿದ್ದಕ್ಕಾಗಿ ನನಗೆ ನಾನೇ ಧನ್ಯವಾದ ಹೇಳಿಕೊಳ್ಳಲು ಬಯಸುತ್ತೇನೆ. ಸಬಲೆಂಕಾರ ಆಕ್ರಮಣಕಾರಿ ಆಟಕ್ಕೆ ನಿಧಾನಗತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಸ್ಪರ್ಧೆಯು ನಿಜವಾಗಿಯೂ ಕಷ್ಟಕರವಾಗಿತ್ತು’’ಎಂದು ಆಂಡ್ರೀವಾ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದ್ದು, ಆಂಡ್ರೀವಾ ಕೊನೆಯ ಕ್ಷಣದಲ್ಲಿ ಹಿಡಿತ ಸಾಧಿಸಿದರು. ರಕ್ಷಣಾತ್ಮಕ ಆಟದ ಮೂಲಕ ಸಬಲೆಂಕಾರ ಸರ್ವ್ನಲ್ಲಿ ಮ್ಯಾಚ್ ಪಾಯಿಂಟ್ ಪಡೆದರು.
ಆಂಡ್ರೀವಾ ಅವರು ಹಾರ್ಡ್ಕೋರ್ಟ್ನಲ್ಲಿ ಇದೇ ಮೊದಲ ಬಾರಿ ಸಬಲೆಂಕಾ ವಿರುದ್ಧ ಜಯ ಸಾಧಿಸಿದರು. ಈ ವರ್ಷ ಬ್ರಿಸ್ಬೇನ್ ಹಾಗೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಎರಡು ಬಾರಿ ಆಂಡ್ರೀವಾರನ್ನು ಸಬಲೆಂಕಾ ಸೋಲಿಸಿದ್ದರು.
ಒಂದೂ ಸೆಟ್ಟನ್ನು ಸೋಲದೆ ಫೈನಲ್ ಗೆ ತಲುಪಿರುವ ಸಬಲೆಂಕಾ ಅವರು ಮತ್ತೊಮ್ಮೆ ನಿರಾಶೆ ಅನುಭವಿಸಿದರು. ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ವಿರುದ್ಧ್ದ ಸೋತಿದ್ದ ಸಬಲೆಂಕಾ ಸತತ ಮೂರನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು.