ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಜ.31ರಿಂದ ಟಿಕೆಟ್ಗಳ ಮಾರಾಟ ಆರಂಭ

Photo Credit | X
ಹೊಸದಿಲ್ಲಿ: ಲಾರ್ಡ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(ಡಬ್ಲ್ಯುಟಿಸಿ)ಫೈನಲ್ಗೆ ಟಿಕೆಟ್ಗಳ ಮಾರಾಟವು ಜನವರಿ 31ರಿಂದ ಆರಂಭವಾಗಲಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬುಧವಾರ ಪ್ರಕಟಿಸಿದೆ.
ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ ಸರಣಿಯ ವೇಳೆ ಭಾರತ ತಂಡವನ್ನು 3-1 ಅಂತರದಿಂದ ಮಣಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವು ಈ ವರ್ಷ ಜೂನ್ 11ರಿಂದ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಲಿರುವ ಡಬ್ಲ್ಯುಟಿಸಿ ಫೈನಲ್ನಲ್ಲಿ ತನ್ನ ಸ್ಥಾನ ಪಡೆದಿತ್ತು. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡವು ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು 2-0 ಅಂತರದಿಂದ ಮಣಿಸಿ ಇದೇ ಮೊದಲ ಬಾರಿ ಫೈನಲ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿತು.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ಟಿಕೆಟ್ಗಳ ಮಾರಾಟ ಪ್ರಕ್ರಿಯೆಯು ಜನವರಿ 31ರಂದು ಭಾರತದ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಈ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಟಿಕೆಟ್ ದರವು ವಯಸ್ಕರಿಗೆ 45 ಪೌಂಡ್ ಹಾಗೂ 16 ವರ್ಷದೊಳಗಿನವರಿಗೆ 15 ಪೌಂಡ್ನಿಂದ ಆರಂಭವಾಗಲಿದೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಡಾಟ್ಕಾಮ್ನಲ್ಲಿ ಟಿಕೆಟ್ ಖರೀದಿಸಬಹುದು.
ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ತನ್ನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯ ತಂಡವು 2023ರಲ್ಲಿ ದಿ ಓವಲ್ನಲ್ಲಿ ಭಾರತವನ್ನು ಮಣಿಸಿ ಗೆದ್ದಿರುವ ಡಬ್ಲ್ಯುಟಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ಹಲವಾರು ಸ್ಮರಣೀಯ ನೆನಪುಗಳನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣಕ್ಕೆ ವಾಪಸಾಗಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಈ ಹಂತ ತಲುಪಲು ನಮ್ಮ ಆಟಗಾರರು ಕಠಿಣ ಶ್ರಮಪಟ್ಟಿದ್ದಾರೆ. ಕಳೆದ ಋತುವಿನಲ್ಲಿ ಆಸ್ಟ್ರೇಲಿಯದಲ್ಲಿ ಪ್ರೇಕ್ಷಕರು ನಮಗೆ ಸಾಕಷ್ಟು ಬೆಂಬಲ ನೀಡಿದ್ದರು.ಲಂಡನ್ನಲ್ಲಿ ಪ್ರಶಸ್ತಿ ನಮ್ಮಲ್ಲೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಲಿದ್ದೇವೆ ಎಂದು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.