ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ಅಗ್ರ ಸ್ಥಾನಕ್ಕೇರಿದ ಭಾರತ
Photo:X/@bcci
ದುಬೈ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡವು, ರವಿವಾರ ಬಿಡುಗಡೆಯಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಂಕಿಂಗ್ ನಲ್ಲಿ ನ್ಯೂಝಿಲೆಂಡ್ ಅನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.
ರಾಂಚಿಯಲ್ಲಿ ನಡೆದ ನಾಲ್ಕನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸುವ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅಮೋಘ 3-1 ಮುನ್ನಡೆ ಪಡೆದಿದ್ದ ಭಾರತ ತಂಡವು, ಬಲಿಷ್ಠ ಅಂಕ ಶೇಕಡಾವಾರು ಆದ 64.58ರ ಮೂಲಕ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿದೆ. ಆಡಿರುವ 8 ಪಂದ್ಯಗಳ ಪೈಕಿ ಐದು ಗೆಲುವು, ಎರಡು ಸೋಲು ಹಾಗೂ ಒಂದು ಡ್ರಾ ಸಾಧಿಸಿರುವ ಭಾರತ ತಂಡವು ಒಟ್ಟು 62 ಅಂಕಗಳನ್ನು ಗಳಿಸಿದ್ದರೆ, ಕಿವೀಸ್ ತಂಡವು ಆಡಿರುವ ಐದು ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಎರಡು ಸೋಲಿನ ಮೂಲಕ 36 ಅಂಕ ಗಳಿಸಿದೆ ಹಾಗೂ ಅದರ ಅಂಕ ಶೇಕಡಾವಾರು 60.00ರಷ್ಟಿದೆ.
ವೆಲ್ಲಿಂಗ್ಟನ್ ಟೆಸ್ಟ್ ಪ್ರಾರಂಭಕ್ಕೂ ಮುನ್ನ 36 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ನ್ಯೂಝಿಲೆಂಡ್ ತಂಡವು, 75 ಶೇಕಡಾವಾರು ಅಂಕವನ್ನು ಹೊಂದಿತ್ತು.
ಆದರೆ, ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ 172 ರನ್ ಗಳ ಬೃಹತ್ ಸೋಲು ಅನುಭವಿಸುವ ಮೂಲಕ 2021ರ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಆದ ನ್ಯೂಝಿಲೆಂಡ್ ತಂಡವು ಎರಡನೆ ಸ್ಥಾನಕ್ಕೆ ಕುಸಿದಿದ್ದು, ಅದರ ಶೇಕಡಾವಾರು ಅಂಕವು 60ರಷ್ಟಿದೆ.
ಮೂರನೆ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವು, ವೆಲ್ಲಿಂಗ್ಟನ್ ಟೆಸ್ಟ್ ನಂತರ ಗಣನೀಯ 12 ಅಂಕಗಳನ್ನು ಸಂಪಾದಿಸಿದ್ದು, 11 ಪಂದ್ಯಗಳಿಂದ 78 ಪಂದ್ಯಗಳನ್ನು ಗಳಿಸಿದೆ. (ಏಳು ಗೆಲುವು, ಮೂರು ಸೋಲು ಹಾಗೂ ಒಂದು ಡ್ರಾ). ಅದರ ಶೇಕಡಾವಾರು ಅಂಕವು ಶೇ. 55ರಿಂದ ಶೇ. 59.09ಕ್ಕೆ ಜಿಗಿದಿದೆ.
ಈ ನಡುವೆ, ಮಾರ್ಚ್ 7ರಂದು ಭಾರತ ತಂಡವು ಇಂಗ್ಲೆಂಡ್ ತಂಡದೆದುರಿನ ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಲಿದೆ.