ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಲು ಇಷ್ಟಪಡುತ್ತೇನೆ: ಮೌನ ಮುರಿದ ಗಂಭೀರ್
ಗೌತಮ್ ಗಂಭೀರ್ | PC : X
ಹೊಸದಿಲ್ಲಿ : ಟಿ20 ವಿಶ್ವಕಪ್ ಟೂರ್ನಿ ಕೊನೆಗೊಂಡ ನಂತರ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರದ ಅವಧಿಯು ಅಂತ್ಯವಾದ ತಕ್ಷಣ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲು ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಮುಂಚೂಣಿಯಲ್ಲಿದ್ದಾರೆ. ಕೋಚ್ ಹುದ್ದೆ ವಹಿಸಿಕೊಳ್ಳುವ ಕುರಿತಂತೆ ಮೌನ ಮುರಿದ ಗಂಭೀರ್, ಭಾರತೀಯ ಕ್ರಿಕೆಟ್ ತಂಡಕ್ಕೆ ಕೋಚ್ ನೀಡಲು ನಾನು ಇಷ್ಟಪಡುವೆ, ಇದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ ಎಂದಿದ್ದಾರೆ.
ಜಾಗತಿಕ ಟಿ20 ಟೂರ್ನಮೆಂಟ್ ಮುಗಿದ ನಂತರ ದ್ರಾವಿಡ್ ಅವರ ಕೋಚ್ ಅವಧಿಯೂ ಕೊನೆಯಾಗಲಿದೆ. ಮುಂಬರುವ ಸವಾಲುಗಳನ್ನು ಮುನ್ನಡೆಸಲು ಬಿಸಿಸಿಐ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತುಂಬಬಲ್ಲ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದೆ.
ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಲು ಇಷ್ಟಪಡುವೆ. ನನ್ನ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ನಾವು 140 ಕೋಟಿ ಭಾರತೀಯರನ್ನು ಪ್ರತಿನಿಧಿಸಬೇಕಾಗುತ್ತದೆ. ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು ನಾನಲ್ಲ. 140 ಕೋಟಿ ಭಾರತೀಯರು ನಮಗಾಗಿ ಪ್ರಾರ್ಥಿಸಲು ಆರಂಭಿಸಿದರೆ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ಅಬುಧಾಬಿಯಲ್ಲಿ ಯುವ ಕ್ರೀಡಾ ಉತ್ಸಾಹಿಗಳೊಂದಿಗಿನ ಸಂವಾದದ ಸಮಯದಲ್ಲಿ ಗಂಭೀರ್ ಹೇಳಿದ್ದಾರೆ.