WPL | ಯುಪಿ ವಾರಿಯರ್ಸ್ ಸ್ಪಿನ್ ಮೋಡಿಗೆ ಚಡಪಡಿಸಿದ ಗುಜರಾತ್ ಜೈಂಟ್ಸ್
ವಾರಿಯರ್ಸ್ ಗೆ ಗೆಲ್ಲಲು 143 ರನ್ ಗುರಿ, ಸೋಫಿಗೆ 3 ವಿಕೆಟ್
Photo: x/@wplt20
ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಯುಪಿ ವಾರಿಯರ್ಸ್ ತಂಡದ ಸ್ಪಿನ್ ಮೋಡಿಗೆ ಚಡಪಡಿಸಿದ ಗುಜರಾತ್ ಜೈಂಟ್ಸ್ 5 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತು.
ಟಾಸ್ ಗೆದ್ದ ವಾರಿಯರ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆರಂಭಿಕ ಬ್ಯಾಟರ್ಗಳಾದ ಲೌರಾ ವೊಲ್ವಾರ್ಡ್ಟ್ ತಂಡದ ನಾಯಕಿ ಬೆಥ್ ಮೂನಿ ರಕ್ಷಣಾತ್ಮಕವಾಗಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ತಂಡದ ನಾಯಕಿ ಬೆಥ್ ಮೂನಿ 16 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಗಳಿಸಿ ಸೋಫಿ ಎಕ್ಲೆಸ್ಟೋನ್ ಅವರ ಎಸೆತಕ್ಕೆ ಗ್ರೇಸ್ ಹರಿಸ್ ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. 26 ಎಸೆತ ಎದುರಿಸಿದ ಲೌರಾ ವೊಲ್ವಾರ್ಡ್ಟ್ 4 ಬೌಂಡರಿ ಸಹಿತ 28 ರನ್ ಪೇರಿಸಿ, ಸೋಫಿ ಅವರ ಬೌಲಿಂಗ್ ನಲ್ಲಿ ಔಟ್ ಆದರು.
ಹರ್ಲಿನ್ ಡಿಯೋಲ್ 24 ಎಸೆತದಲ್ಲಿ 1 ಬೌಂಡರಿ ಸಹಿತ 18 ರನ್ ಗಳಿಸಿ ರಾಜೇಶ್ವರಿ ಗಾಯಕ್ವಾಡ್ ಅವರ ಸ್ಪಿನ್ ಗೆ ಅಂಜಲಿ ಸರ್ವಾನಿಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಪೋಬೆ ಲಿಚ್ಫೀಲ್ಡ್ 26 ಎಸೆತ ಎದುರಿಸಿ 4 ಬೌಂಡರಿ 1 ಸಿಕ್ಸ್ ಹೊಡೆದು 35 ರನ್ ಗಳಿಸಿ ಸೈಮಾ ತಾಕೋರ್ ಅವರ ರನೌಟ್ ಗೆ ಗುರಿಯಾದರು. ಅಶ್ಲೇಗ್ ಗಾರ್ಡ್ನೆರ್ 17 ಎಸೆತಗಳಲ್ಲಿ 1 ಸಿಕ್ಸರ್ 4 ಬೌಂಡರಿ ಬಾರಿಸಿ ಅಲ್ಪ ಮಟ್ಟಿನಲ್ಲಿ ತಂಡಕ್ಕೆ ಆಸರೆಯಾಗಿ ಸೋಫಿ ಎಸೆತಕ್ಕೆ ಪೆವಿಲಿಯನ್ ಸೇರಿದಾಗ ದಯಾಲನ್ ಹೇಮಲತಾ 2 ರನ್ ಗಳಿಸಿದರು. ಕತ್ರೈನ್ ಎಮ್ಮ ಬ್ರೈಸ್ 5 ರನ್ ಗಳಿಸಿ ಅಜೇಯರಾಗಿ ಉಳಿದರು.
5 ವಿಕೆಟ್ ಕಳೆದುಕೊಂಡ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 142 ರನ್ ಗಳಿಸಿತು. ಯು ಪಿ ವಾರಿಯರ್ಸ್ ಬೌಲರ್ ಗಳಾದ ಸೋಫಿ ಎಕ್ಲೆಸ್ಟೋನ್ ಸ್ಪಿನ್ ಮೋಡಿಯಿಂದ 3 ವಿಕೆಟ್ ಉರುಳಿಸಿದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದು ಮಿಂಚಿದರು.