ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ ಕುಸ್ತಿಪಟು ವಿನೇಶ್ ಫೋಗಟ್
ವಿನೇಶ್ ಫೋಗಟ್ | PC : PTI
ಹೊಸದಿಲ್ಲಿ: ಭಾರತದ ಕುಸ್ತಿತಾರೆ ವಿನೇಶ್ ಫೋಗಟ್ ಅಮೃತಸರದ ಗೋಲ್ಡನ್ ಟೆಂಪಲ್ಗೆ ಶುಕ್ರವಾರ ಭೇಟಿ ನೀಡಿ ತನಗೆ ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ.
ಗೋಲ್ಡನ್ ಟೆಂಪಲ್ನಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿನೇಶ್ ಫೋಗಟ್, ಇಲ್ಲಿಗೆ ಬಂದ ನಂತರ ನನಗೆ ತುಂಬಾ ಸಂತೋಷವಾಗಿದೆ. ನನಗೆ ಸಕಾರಾತ್ಮಕ ಶಕ್ತಿ ಸಿಕ್ಕ ಅನುಭವವಾಗುತ್ತಿದೆ. ನನಗೆ ಶಕ್ತಿ ನೀಡುವಂತೆ ವಾಹೆಗುರುವನ್ನು ಪ್ರಾರ್ಥಿಸಿದೆ ಎಂದು ಹೇಳಿದ್ದಾರೆ.
ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ಗೆ ತಲುಪಿದ್ದರೂ 100 ಗ್ರಾಂ ಅಧಿಕ ತೂಕ ಇದ್ದಾರೆಂಬ ಕಾರಣಕ್ಕೆ ಫೈನಲ್ನಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿತ್ತು. ಅನರ್ಹಗೊಂಡ ಮರುದಿನವೇ ವಿನೇಶ್ ಕುಸ್ತಿಗೆ ವಿದಾಯ ಹೇಳಿದ್ದರು. ತನಗೆ ಬೆಳ್ಳಿ ಪದಕವನ್ನು ನೀಡುವಂತೆ ಕೋರಿ ಕ್ರೀಡಾ ನ್ಯಾಯ ಮಂಡಳಿಯ(ಸಿಎಎಸ್) ಮೊರೆ ಹೋಗಿದ್ದರು ಆದರೆ. ಹಲವಾರು ಬಾರಿ ತನ್ನ ತೀರ್ಪನ್ನು ಮುಂದೂಡಿದ ನಂತರ ನ್ಯಾಯ ಮಂಡಳಿಯು ವಿನೇಶ್ ಅವರ ಕೋರಿಕೆಯನ್ನು ತಿರಸ್ಕರಿಸಿತ್ತು.
ಕಠಿಣ ಪರಿಶ್ರಮದಿಂದ ಫೈನಲ್ಗೆ ತಲುಪಿದ್ದರೂ ಕೊರಳಿಗೆ ಪದಕ ಧರಿಸಲಾಗದೆ ಆಗಸ್ಟ್ 17ರಂದು ಸ್ವದೇಶಕ್ಕೆ ಆಗಮಿಸಿದ್ದ ವಿನೇಶ್ಗೆ ಸಾವಿರಾರು ಜನರು ಸ್ವಾಗತಿಸಿದರು. ಅವರ ತವರುಪಟ್ಟಣ ಭಿವಾನಿಯಲ್ಲಿ ಹಾರ ಹಾಗೂ ಹೂಗಳನ್ನು ಹಾಕಿ ಸ್ವಾಗತಿಸಲಾಗಿತ್ತು.