ಕುಸ್ತಿ ಫೆಡರೇಷನ್ ಅಧ್ಯಕ್ಷ ಚುನಾವಣಾ ಕಣದಿಂದ ಬ್ರಿಜ್ ಭೂಷಣ್ ಹೊರಕ್ಕೆ
ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಅವರ ಪುತ್ರ ಆಗಸ್ಟ್ 12ರಂದು ನಡೆಯುವ ಚುನಾವಣಾ ಕಣದಿಂದ ಕೊನೆಗೂ ಹೊರಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರು ಅರ್ಹ ಮತದಾರರ ಪಟ್ಟಿಯನ್ನು ಅಂತಿಮಪಡಿಸಿದ್ದು, ಬ್ರಿಜ್ಭೂಷಣ್ ಸಿಂಗ್ ಅಥವಾ ಉತ್ತರ ಪ್ರದೇಶ ಕುಸ್ತಿ ಸಂಘದ ಅಧ್ಯಕ್ಷರಾಗಿರುವ ಅವರ ಕಿರಿಯ ಪುತ್ರ ಕರಣ್ ಅವರ ಹೆಸರು ಅಂತಿಮ ಪಟ್ಟಿಯಲ್ಲಿಲ್ಲ. ರಾಜ್ಯ ಸಂಘವನ್ನು ಪ್ರತಿನಿಧಿಸಬೇಕಿದ್ದ ಇವರಿಬ್ಬರ ಬಲದಾಗಿ ಪ್ರೇಮ್ ಕುಮಾರ್ ಮಿಶ್ರಾ ಮತ್ತು ಸಂಜಯ್ ಸಿಂಗ್ ಮತದಾನ ಮಾಡಲಿದ್ದಾರೆ. ಕಳಂಕಿತ ಅಧ್ಯಕ್ಷ ಹಾಗೂ ಅವರ ಪುತ್ರ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಆದರೆ ಬಿಹಾರ ಕುಸ್ತಿ ಸಂಘದ ಅಧ್ಯಕ್ಷ ಹಾಗೂ ಬ್ರಿಜ್ ಭೂಷಣ್ ಅವರ ಅಳಿಯ ವಿಶಾಲ ಪ್ರತಾಪ್ ಸಿಂಗ್ ಹೆಸರು ಪಟ್ಟಿಯಲ್ಲಿದೆ. ರಾಜ್ಯದ ಪರವಾಗಿ ವಿನಯ್ ಕುಮಾರ್ ಸಿಂಗ್ ಜತೆ ವಿಶಾಲ್ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಬ್ರಿಜ್ಭೂಷಣ್ ಅವರ ಹುದ್ದೆಗೆ ಈ ಇಬ್ಬರು ಉತ್ತರಾಧಿಕಾರಿಗಳು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ತಂದೆ- ಮಗನ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಭಾರತೀಯ ಕುಸ್ತಿ ಒಕ್ಕೂಟದಲ್ಲಿ ಬಿಜೆಪಿ ಮುಖಂಡನ ಯುಗ ಮುಗಿದಂತಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
2023 ರಿಂದ 2026ರ ಅವಧಿಯ ಪದಾಧಿಕಾರಿ ಹುದ್ದೆಗಳಿಗೆ ಸ್ಪರ್ಧಿಸಲು ಅರ್ಹತೆ ಪಡೆದವರ ಪಟ್ಟಿಯಲ್ಲಿ ಕೆಲ ಕುತೂಹಲಕರ ಹೆಸರುಗಳು ಕಂಡುಬಂದಿವೆ. ರೈಲ್ವೆ ಕ್ರೀಡಾ ಉತ್ತೇಜನ ಮಂಡಳಿಯ ಕಾರ್ಯದರ್ಶಿ ಪ್ರೇಮ್ ಚಂದ ಲೊಚಾಬ್ ಅವರ ಹೆಸರು ಈ ಪೈಕಿ ಒಂದು. ಹರ್ಯಾಣ ಹಾಗೂ ರಾಜಸ್ಥಾನದ ಜಾಟ್ ಸಮುದಾಯದ ಮೇಲೆ ಉತ್ತಮ ನಿಯಂತ್ರಣ ಹೊಂದಿರುವ ಇವರು ಗುಜರಾತ್ ನಿಂದ ಐ.ಡಿ.ನಾನಾವತಿ ಜತೆ ಮತ ಚಲಾಯಿಸುವ ಅಧಿಕಾರ ಪಡೆದಿದ್ದಾರೆ. ನಾನಾವತಿ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದು, ಬ್ರಿಜ್ಭೂಷಣ್ ಅವರ ಬೆಂಬಲಿಗ.
ಮೂಲತಃ ರಾಜಸ್ಥಾನದವರಾಗಿರುವ ಲೊಚಾಬ್, ಗುಜರಾತ್ ಕುಸ್ತಿ ಸಂಘದ ಆಡಳಿತ ಮಂಡಳಿ ಸದಸ್ಯರಲ್ಲ. ಡಬ್ಲ್ಯುಎಫ್ಐ ನಿಯಮಾವಳಿ ಪ್ರಕಾರ ರಾಜ್ಯ ಸಂಘಗಳ ಆಡಳಿತ ಮಂಡಳಿ ಸದಸ್ಯರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ ಲೊಚಾಬ್ ಅವರಿಗೆ ಗುಜರಾತ್ನಿಂದ ಮತ ಚಲಾಯಿಸಲು ಹೇಗೆ ಅರ್ಹತೆ ಬಂದಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.