ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ನಾಲ್ಕು ತಂಡಗಳ ಪೈಪೋಟಿ
PC : X/@SPORTYVISHAL
ಹೊಸದಿಲ್ಲಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸ್ಪರ್ಧೆ ಅಂತಿಮ ಹಂತದಲ್ಲಿದ್ದು, ನಾಲ್ಕು ತಂಡಗಳಾದ-ಆಸ್ಟ್ರೇಲಿಯ, ಭಾರತ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಮುಂದಿನ ವರ್ಷ ಲಾರ್ಡ್ಸ್ನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಎರಡು ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿವೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಎರಡು ಬಾರಿಯ ಫೈನಲಿಸ್ಟ್ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪ್ರಬಲ ಸ್ಪರ್ಧಿಗಳಾಗಿದ್ದು, ಶ್ರೀಲಂಕಾ ತಂಡ ಕೂಡ ಮೊದಲ ಬಾರಿ ಡಬ್ಲ್ಯುಟಿಸಿ ಫೈನಲ್ಗೆ ತಲುಪುವ ಬಾಹ್ಯ ಅವಕಾಶ ಹೊಂದಿದೆ.
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಸ್ವದೇಶದಲ್ಲಿ ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ತನ್ನ ಸ್ಥಾನ ಮತ್ತಷ್ಟು ಭದ್ರಪಡಿಸಿಕೊಳ್ಳುವ ಭರವಸೆಯಲ್ಲಿದೆ.
ಮತ್ತೊಂದೆಡೆ ಭಾರತದ ಡಬ್ಲ್ಯುಟಿಸಿ ಫೈನಲ್ ವಿಶ್ವಾಸವು ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಉಳಿದೆರಡು ಟೆಸ್ಟ್ ಪಂದ್ಯಗಳ ಗೆಲುವನ್ನು ಅವಲಂಬಿಸಿದೆ.
ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಎರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದರೆ ಡಬ್ಲ್ಯುಟಿಸಿ ಫೈನಲ್ಗೆ ನೇರ ಪ್ರವೇಶ ಪಡೆಯಲಿದೆ.
ಆದರೆ ಬ್ಯಾಟರ್ಗಳ ಪ್ರಸಕ್ತ ಫಾರ್ಮ್ ಅನ್ನು ಗಮನಿಸಿದರೆ ಆಸ್ಟ್ರೇಲಿಯದಲ್ಲಿ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವುದು ಭಾರತದ ಪಾಲಿಗೆ ಕಠಿಣ ಸವಾಲಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೆಲವು ಅಚ್ಚರಿಯ ಫಲಿತಾಂಶ ಪಡೆದರೆ ಭಾರತ ಡಬ್ಲ್ಯುಟಿಸಿ ಫೈನಲ್ಗೆ ಲಗ್ಗೆ ಇಡಲಿದೆ.
ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯ ವಿರುದ್ಧ ಪ್ರಸಕ್ತ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಒಂದರಲ್ಲಿ ಜಯ ಹಾಗೂ ಇನ್ನೊಂದರಲ್ಲಿ ಡ್ರಾ ಸಾಧಿಸಿದರೆ ಅದರ ಗೆಲುವಿನ ಶೇಕಡಾಂಶ 57.02 ತಲುಪಲಿದೆ. ಇದು ನೇರ ಪ್ರವೇಶಕ್ಕೆ ಸಾಕಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನ ತಂಡ ಭಾರತ ಫೈನಲ್ಗೆ ತಲುಪಲು ನೆರವಾಗಬಹುದು.
ಒಂದು ವೇಳೆ ಪಾಕಿಸ್ತಾನ ತಂಡವು ಕನಿಷ್ಠ ಒಂದು ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡರೆ ಭಾರತದ ಅವಕಾಶ ಹೆಚ್ಚಾಗಲಿದೆ. ಒಂದು ವೇಳೆ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾದಲ್ಲಿ 1-0 ಅಂತರದಿಂದ ಸರಣಿ ಗೆದ್ದರೆ, ಭಾರತದ ಅವಕಾಶ ಗಣನೀಯವಾಗಿ ಹೆಚ್ಚಳವಾಗಲಿದೆ.
ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಜಯಿಸಿದರೆ ಭಾರತ ತಂಡವು ಶ್ರೀಲಂಕಾ-ಆಸ್ಟ್ರೇಲಿಯ ಸರಣಿಯ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಒಂದು ವೇಳೆ ಆಸ್ಟ್ರೇಲಿಯ ತಂಡವು ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಸರಣಿ ಗೆದ್ದರೆ ಭಾರತ ಫೈನಲ್ನಿಂದ ವಂಚಿತವಾಗಲಿದೆ.
ಭಾರತ ತಂಡ ಶ್ರೀಲಂಕಾ-ಆಸ್ಟ್ರೇಲಿಯ ಸರಣಿಗಳನ್ನು ಅವಲಂಬನೆಯನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯನ್ನು ಗೆಲ್ಲಬೇಕಾಗಿದೆ.
ಒಂದು ವೇಳೆ ಪಾಕಿಸ್ತಾನ ತಂಡವು ಹರಿಣ ಪಡೆಯನ್ನು 2-0 ಅಂತರದಿಂದ ಮಣಿಸಿದರೆ ಭಾರತದ ಫೈನಲ್ ಹಾದಿ ಸುಗಮವಾಗಲಿದೆ.
ಆದರೆ, ಐತಿಹಾಸಿಕವಾಗಿ ಶ್ರೀಲಂಕಾ ಮಾತ್ರ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಏಶ್ಯದ ಏಕೈಕ ತಂಡವಾಗಿದೆ. ಹೀಗಾಗಿ ಪಾಕಿಸ್ತಾನದ ಮುಂದೆ ಕಠಿಣ ಸವಾಲಿದೆ.