ಕೆಕೆಆರ್ ಲೆಜೆಂಡ್ ಸುನೀಲ್ ನರೇನ್ ದಾಖಲೆ ಸರಿಗಟ್ಟಿದ ಯಜುವೇಂದ್ರ ಚಹಾಲ್

ಯಜುವೇಂದ್ರ ಚಹಾಲ್ | PTI
ಹೊಸದಿಲ್ಲಿ: ಐಪಿಎಲ್ ಟಿ20 ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಹೆಚ್ಚು ನಾಲ್ಕು ವಿಕೆಟ್ ಗೊಂಚಲು ಪಡೆದಿರುವ ಕೋಲ್ಕತಾ ನೈಟ್ ರೈಡರ್ಸ್ ಲೆಜೆಂಡ್ ಸುನೀಲ್ ನರೇನ್ ಅವರ ದಾಖಲೆಯನ್ನು ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಸರಿಗಟ್ಟಿದ್ದಾರೆ. ಮಂಗಳವಾರ ಮುಲ್ಲನ್ಪುರದಲ್ಲಿ ನಡೆದಿರುವ ಐಪಿಎಲ್ ಪಂದ್ಯದ ವೇಳೆ ಚಹಾಲ್ ಈ ಸಾಧನೆ ಮಾಡಿದ್ದಾರೆ.
ಕೇವಲ 111 ರನ್ ಗಳಿಸಿದ್ದರೂ ಚಹಾಲ್ ಅವರ ಆಕರ್ಷಕ ಸ್ಪೆಲ್(4-28)ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಕೆಕೆಆರ್ ವಿರುದ್ಧ 16 ರನ್ ಅಂತರದಿಂದ ರೋಚಕ ಜಯ ಸಾಧಿಸಿತ್ತು.
ಚಹಾಲ್ ಅವರು ಅಜಿಂಕ್ಯ ರಹಾನೆ, ಎ.ರಘುವಂಶಿ, ರಿಂಕು ಸಿಂಗ್ ಹಾಗೂ ರಮಣ್ದೀಪ್ ಸಿಂಗ್ ರಂತಹ ನಿರ್ಣಾಯಕ ವಿಕೆಟ್ಗಳನ್ನು ಪಡೆದು ಅಮೋಘ ಪ್ರದರ್ಶನ ನೀಡಿದರು. 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದ ಕೆಕೆಆರ್ ತಂಡವು 95 ರನ್ ಗಳಿಸಿ ಅಲೌಟಾಗಿದೆ. ಚಹಾಲ್ ಐಪಿಎಲ್ ಟೂರ್ನಿಯಲ್ಲಿ 8ನೇ ಬಾರಿ 4 ವಿಕೆಟ್ ಗೊಂಚಲು ಕಬಳಿಸಿ ನರೇನ್ ಅವರ ದಾಖಲೆಯನ್ನು ಸರಿಗಟ್ಟಿದರು.
ಲೆಗ್ ಸ್ಪಿನ್ನರ್ ಮತ್ತೊಂದು ಮೈಲಿಗಲ್ಲು ತಲುಪಿದ್ದು, ಕೆಕೆಆರ್ ವಿರುದ್ಧ 33 ವಿಕೆಟ್ಗಳನ್ನು ಪಡೆದು 3ನೇ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಚಹಾಲ್ ಅವರು ಕೆಕೆಆರ್ ವಿರುದ್ಧ 3ನೇ ಬಾರಿ 4 ವಿಕೆಟ್ ಗೊಂಚಲು ಪಡೆದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಎದುರಾಳಿಯ ವಿರುದ್ಧ ಬೌಲರ್ವೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಚಹಾಲ್ 6 ಪಂದ್ಯಗಳಲ್ಲಿ 32.50ರ ಸರಾಸರಿಯಲ್ಲಿ 10.26ರ ಇಕಾನಮಿ ರೇಟ್ ನಲ್ಲಿ 6 ವಿಕೆಟ್ಗಳನ್ನು ಪಡೆದಿದ್ದಾರೆ. ಟಿ20 ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ 11ನೇ ಬೌಲರ್ ಎನಿಸಿಕೊಂಡಿರುವ ಚಹಾಲ್ ಅವರು ಟಿ20 ದಿಗ್ಗಜರಾದ ಮುಹಮ್ಮದ್ ನಬಿ(369 ವಿಕೆಟ್ಗಳು)ಹಾಗೂ ಮುಹಮ್ಮದ್ ಆಮಿರ್(366 ವಿಕೆಟ್ಗಳು)ಅವರ ದಾಖಲೆಯನ್ನು ಮುರಿದಿದ್ದಾರೆ.
318 ಪಂದ್ಯಗಳಲ್ಲಿ 370 ವಿಕೆಟ್ಗಳನ್ನು ಉರುಳಿಸಿರುವ ಚಹಾಲ್ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಸಂಪಾದಿಸಿದ ಬೌಲರ್ ಆಗಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ 468 ಪಂದ್ಯಗಳಲ್ಲಿ 638 ವಿಕೆಟ್ಗಳನ್ನು ಕಬಳಿಸಿ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮಂಗಳವಾರ ನಡೆದಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ ತಂಡವು ಹರ್ಷಿತ್ ರಾಣಾ(3-25), ಸುನೀಲ್ ನರೇನ್(2-14) ಹಾಗೂ ವರುಣ್ ಚಕ್ರವರ್ತಿ(2-21)ಬೌಲಿಂಗ್ ದಾಳಿಗೆ ತತ್ತರಿಸಿ 15.3 ಓವರ್ ಗಳಲ್ಲಿ 111 ರನ್ ಗಳಿಸಿ ಆಲೌಟಾಗಿತ್ತು. ಇದಕ್ಕೆ ಉತ್ತರಿಸಹೊರಟ ಕೆಕೆಆರ್ ತಂಡವು ಚಹಾಲ್(4-28)ಹಾಗೂ ಮಾರ್ಕೊ ಜಾನ್ಸನ್(3-17)ಅವರ ನಿಖರವಾದ ಬೌಲಿಂಗ್ ದಾಳಿಗೆ ತತ್ತರಿಸಿ 15.1 ಓವರ್ ಗಳಲ್ಲಿ 95 ರನ್ ಗಳಿಸಿ ಆಲೌಟಾಯಿತು.