2024ರಲ್ಲಿ ಭಾರತದ ಗರಿಷ್ಠ ಟೆಸ್ಟ್ ಸ್ಕೋರರ್ ಎನಿಸಿಕೊಂಡ ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್ | PTI
ಮೆಲ್ಬರ್ನ್ : ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಪಾಲಿಗೆ 2024 ಯಶಸ್ವಿ ವರ್ಷವಾಗಿದ್ದು, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ವಿರುದ್ಧ ಸೋಮವಾರ ಕೊನೆಗೊಂಡಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೂ ಅವರು ಅಮೋಘ ಪ್ರದರ್ಶನ ನೀಡಿದ್ದಾರೆ. 4ನೇ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅವಳಿ ಅರ್ಧಶತಕಗಳನ್ನು ಗಳಿಸಿದ್ದರೂ ಭಾರತ ತಂಡವು 184 ರನ್ ಅಂತರದಿಂದ ಸೋಲುಂಡಿದೆ.
ಆಸ್ಟ್ರೇಲಿಯ 4ನೇ ಟೆಸ್ಟ್ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಜೈಸ್ವಾಲ್ ಎರಡೂ ಇನಿಂಗ್ಸ್ಗಳಲ್ಲಿ ಭಾರತ ತಂಡ ಬ್ಯಾಟಿಂಗ್ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಲು ನೆರವಾಗಿದ್ದರು. ಮೊದಲ ಇನಿಂಗ್ಸ್ನಲ್ಲಿ ರನೌಟಾಗುವ ಮೊದಲು ಕೇವಲ 118 ಎಸೆತಗಳಲ್ಲಿ 82 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್ನಲ್ಲಿ 340 ರನ್ ಚೇಸ್ ವೇಳೆ ಜೈಸ್ವಾಲ್ 3ನೇ ಅಂಪೈರ್ರ ವಿವಾದಾತ್ಮಕ ತೀರ್ಪಿಗೆ ಔಟಾಗುವ ಮೊದಲು 208 ಎಸೆತಗಳಲ್ಲಿ 84 ರನ್ ಗಳಿಸಿದ್ದರು. 4ನೇ ಇನಿಂಗ್ಸ್ನಲ್ಲಿ ಜೈಸ್ವಾಲ್ ವಿಕೆಟ್ ಪತನಗೊಂಡ ನಂತರ ಭಾರತದ ಪ್ರತಿ ಹೋರಾಟವೂ ಬಹುತೇಕ ಅಂತ್ಯವಾಗಿ 155 ರನ್ಗೆ ಆಲೌಟಾಯಿತು.
ಮೆಲ್ಬರ್ನ್ನಲ್ಲಿ ಜೈಸ್ವಾಲ್ ಸಾಧನೆಯು ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. ಟೆಸ್ಟ್ ಪಂದ್ಯದಲ್ಲಿ 82 ಹಾಗೂ 84 ರನ್ ಗಳಿಸಿರುವ ಜೈಸ್ವಾಲ್ ಅವರು 1987ರ ನಂತರ ಪ್ರತಿಷ್ಠಿತ ಎಂಸಿಜಿಯಲ್ಲಿ ಪ್ರತೀ ಇನಿಂಗ್ಸ್ಗಳಲ್ಲಿ 75ಕ್ಕೂ ಅಧಿಕ ರನ್ ಗಳಿಸಿದ ಪ್ರವಾಸಿ ತಂಡದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. 1987ರಲ್ಲಿ ನ್ಯೂಝಿಲ್ಯಾಂಡ್ನ ಮಾರ್ಟಿನ್ ಕ್ರೋವ್ ಈ ಸಾಧನೆ ಮಾಡಿದ್ದರು.
ಯುವ ಕ್ರಿಕೆಟಿಗ 2024ರಲ್ಲಿ ತನ ಯಶಸ್ವಿ ಓಟವನ್ನು ಮುಂದುವರಿಸಿದ್ದು, 15 ಪಂದ್ಯಗಳಲ್ಲಿ 54.74ರ ಸರಾಸರಿಯಲ್ಲಿ ಮೂರು ಶತಕ ಹಾಗೂ 9 ಅರ್ಧಶತಕಗಳ ಸಹಿತ 1,478 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ನ ಎರಡನೇ ಗರಿಷ್ಠ ರನ್ ಸ್ಕೋರರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ ಮಾತ್ರ ಈ ವರ್ಷ 17 ಟೆಸ್ಟ್ ಪಂದ್ಯಗಳಲ್ಲಿ 55.57ರ ಸರಾಸರಿಯಲ್ಲಿ 1,556 ರನ್ ಗಳಿಸಿದ್ದಾರೆ.
ಈ ವರ್ಷ ಭಾರತದ ಪರ ಜೈಸ್ವಾಲ್ ಸರ್ವಾಧಿಕ ಸ್ಕೋರ್ ಗಳಿಸಿದ್ದು, ಒಟ್ಟು 866 ರನ್ ಮೂಲಕ ಶುಭಮನ್ ಗಿಲ್ 2ನೇ ಸ್ಥಾನದಲ್ಲಿದ್ದಾರೆ. 23ರ ಹರೆಯದ ಜೈಸ್ವಾಲ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದ ಸಚಿನ್ ತೆಂಡುಲ್ಕರ್(2010ರಲ್ಲಿ 1,562)ದಾಖಲೆಯನ್ನು ಮುರಿಯುವುದಕ್ಕೆ ಹತ್ತಿರವಾಗಿದ್ದರು. ಅಂತಿಮವಾಗಿ ತೆಂಡುಲ್ಕರ್ ಹಾಗೂ ಸುನೀಲ್ ಗವಾಸ್ಕರ್(1979ರಲ್ಲಿ 1555)ನಂತರ ಭಾರತದ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದರು.
2023ರ ಜುಲೈನಲ್ಲಿ ತನ್ನ ಚೊಚ್ಚಲ ಪಂದ್ಯ ಆಡಿದ ನಂತರ ಜೈಸ್ವಾಲ್ ಅವರು ಭಾರತದ ಓರ್ವ ಶ್ರೇಷ್ಠ ಆರಂಭಿಕ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೇವಲ 18 ಟೆಸ್ಟ್ ಪಂದ್ಯಗಳಲ್ಲಿ 55.18ರ ಸರಾಸರಿಯಲ್ಲಿ 4 ಶತಕ ಹಾಗೂ 10 ಅರ್ಧಶತಕಗಳ ಸಹಿತ 1,766 ರನ್ ಗಳಿಸಿದ್ದಾರೆ.
ಈ ವರ್ಷ ಎರಡು ದ್ವಿಶತಕದ ಸಾಧನೆ: ಜೈಸ್ವಾಲ್ ಅವರು ಆಸ್ಟ್ರೇಲಿಯ ವಿರುದ್ಧ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಪರ್ತ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 161 ರನ್ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು. ಈ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯಗಳಲ್ಲಿ ಎರಡು ಬಾರಿ ದ್ವಿಶತಕ ಗಳಿಸಿದ್ದರು. ವಿಶಾಖಪಟ್ಟಣದಲ್ಲಿ 209 ರನ್ ಗಳಿಸಿದ್ದ ಜೈಸ್ವಾಲ್ ಅವರು ರಾಜ್ಕೋಟ್ನಲ್ಲಿ ಔಟಾಗದೆ 214 ರನ್ ಗಳಿಸಿದ್ದರು.
ಕೇವಲ 2 ದಿನಗಳ ಹಿಂದೆ 23ನೇ ವಸಂತಕ್ಕೆ ಕಾಲಿಟ್ಟಿರುವ ಜೈಸ್ವಾಲ್ ಅವರು ಉದಯೋನ್ಮುಖ ಸ್ಟಾರ್ ಆಗಿದ್ದು, ಭಾರತೀಯ ಕ್ರಿಕೆಟ್ನಲ್ಲಿ ಇನ್ನಷ್ಟು ದಾಖಲೆಗಳು ಹಾಗೂ ಹೊಸ ಮೈಲಿಗಲ್ಲು ತಲುಪುವ ವಿಶ್ವಾಸದಲ್ಲಿದ್ದಾರೆ.
*2024ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸರದಾರರು.
1,556-ಜೋ ರೂಟ್(ಇಂಗ್ಲೆಂಡ್)
1,478-ಯಶಸ್ವಿ ಜೈಸ್ವಾಲ್(ಭಾರತ)
1,149-ಬೆನ್ ಡಕೆಟ್(ಇಂಗ್ಲೆಂಡ್)
1,100-ಹ್ಯಾರಿ ಬ್ರೂಕ್(ಇಂಗ್ಲೆಂಡ್)
1,049-ಕಮಿಂದು ಮೆಂಡಿಸ್(ಶ್ರೀಲಂಕಾ)
ಭಾರತದ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ಗಳು
1,562-ಸಚಿನ್ ತೆಂಡುಲ್ಕರ್(2010)
1,555-ಸುನೀಲ್ ಗವಾಸ್ಕರ್(1979)
1,478-ಯಶಸ್ವಿ ಜೈಸ್ವಾಲ್(2024)
1,462-ವೀರೇಂದ್ರ ಸೆಹ್ವಾಗ್(2008)
1,422-ವೀರೇಂದ್ರ ಸೆಹ್ವಾಗ್(2010)