ನಿಮ್ಮ ಜೀವನವು ಎಲ್ಲರಿಗೂ ಸ್ಫೂರ್ತಿದಾಯಕ : ಅಮನ್ ಸೆಹ್ರಾವತ್ಗೆ ಪ್ರಧಾನಿ ಶ್ಲಾಘನೆ

ಅಮನ್ ಸೆಹ್ರಾವತ್ | PC : NDTV
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಫ್ರೀಸ್ಟೈಲ್ 57ಕೆಜಿ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಕುಸ್ತಿಪಟು ಅಮನ್ ಸೆಹ್ರಾವತ್ಗೆ ಫೋನ್ ಕರೆ ಮಾಡಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಣ್ಣ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡಿರುವ ನಿಮ್ಮ ಜೀವನವು ಎಲ್ಲರಿಗೂ ಸ್ಫೂರ್ತಿದಾಯಕ ಎಂದಿದ್ದಾರೆ.
ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಯುವ ಕ್ರೀಡಾಪಟುವಿನ ಸಾಧನೆಯನ್ನು ಕೊಂಡಾಡಿದ ಪ್ರಧಾನಿ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅಮನ್ ಅವರ ಸ್ಥೈರ್ಯ ಹಾಗೂ ದೃಢತೆ ಶ್ಲಾಘನೀಯ. ಚಿಕ್ಕ ವಯಸ್ಸಿನಲ್ಲೇ ತನ್ನ ಹೆತ್ತವರನ್ನು ಕಳೆದುಕೊಂಡು ಸಾಕಷ್ಟು ಸವಾಲುಗಳನ್ನು ಎದುರಿಸಿದ ಹೊರತಾಗಿಯೂ ಅಮನ್ ಅವರು ಅಚಲವಾದ ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಜೀವನವು ಇತರಿಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ಎಕ್ಸ್ನಲ್ಲಿ ಬರೆದಿದ್ದಾರೆ.
ಜುಲೈ 16ರಂದು 21ನೇ ವಯಸ್ಸಿಗೆ ಕಾಲಿಟ್ಟಿರುವ ಸೆಹ್ರಾವತ್ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲಿ ಪೋರ್ಟೊ ರಿಕೊದ ಡೇರಿಯನ್ ಕ್ರೂಝ್ ವಿರುದ್ಧ 13-5ರಿಂದ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎನಿಸಿಕೊಂಡರು.
ಸೆಹ್ರಾವತ್ಗಿಂತ ಮೊದಲು ಪಿ.ವಿ.ಸಿಂಧು ಈ ದಾಖಲೆ ನಿರ್ಮಿಸಿದ್ದರು. ಸಿಂಧು 2016ರ ಒಲಿಂಪಿಕ್ಸ್ನಲ್ಲಿ 21 ವರ್ಷ, ಒಂದು ತಿಂಗಳ ವಯಸ್ಸಿನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.