ಝಂಪಾ ಸ್ಪಿನ್ ದಾಳಿ, ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಗೆ 62 ರನ್ ಗೆಲುವು
ಡೇವಿಡ್ ವಾರ್ನರ್, ಮಿಷೆಲ್ ಮಾರ್ಷ್ ಶತಕಕ್ಕೆ ಒಲಿದ ಜಯ
Photo : Cricketworldcup̤.com
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಾಕಿಸ್ತಾನ ವಿರುದ್ಧ ಅಸ್ಟ್ರೇಲಿಯಾ 62 ರನ್ ಗಳ ಜಯ ಗಳಿಸಿದೆ.
ಅಸ್ಟ್ರೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಮಾರ್ಷ್ ಸ್ಪೋಟಕ ಶತಕದ ನೆರವಿನಿಂದ 367 ರನ್ ಪೇರಿಸಿತು. ಕಠಿಣ ಗುರಿ ಪಡೆದು ಬ್ಯಾಟಿಂಗ್ ಬಂದ ಪಾಕಿಸ್ತಾನ ಬ್ಯಾಟರ್ಸ್, ಮೊದಲ ವಿಕೆಟ್ ನಷ್ಟಕ್ಕೆ 134 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಒಳ್ಳೆಯ ಆರಂಭ ನೀಡಿದರು.
ಪಾಕ್ ಪರ ಅಬ್ದುಲ್ಲಾ ಶಫೀಕ್ 7 ಬೌಂಡರಿ 2 ಸಿಕ್ಸರ್ ಸಹಿತ 64 ರನ್ ಬಾರಿಸಿ ಮಾರ್ಕಸ್ ಸ್ಟೋನಿಸ್ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಕ್ಯಾಚ್ ನೀಡಿ ಔಟ್ ಆದರೆ ಇಮಾಮ್ ಉಲ್ ಹಕ್ 70 ರನ್ ಸ್ಟಾರ್ಕ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಎರಡು ಆರಂಭಿಕ ವಿಕೆಟ್ ಪತನ ನಂತರ ಗೆಲುವಿನ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಬ್ಯಾಟಿಂಗ್ ಮಾಡಬೇಕಿದ್ದ ನಾಯಕ ಬಾಬರ್ ಅಝಮ್ 18 ರನ್ ಗೆ ಆಡಂ ಝಾಂಪ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುವ ಮೂಲಕ ಅಭಿಮಾನಿಗಳನ್ನು ಮತ್ತೊಮ್ಮೆ ನಿರಾಶೆ ಗೊಳಿಸಿದರು.
ಸೌದ್ ಶಕೀಲ್ 30 ಬಾರಿಸಿ ಪ್ಯಾಟ್ ಕಮ್ಮಿನ್ಸ್ ವಿಕೆಟ್ ನೀಡಿದರೆ ಮೂರು ಸಿಕ್ಸರ್ ಬಾರಿಸಿ ಫೀಲ್ಡ್ ಗೆ ತಕ್ಕಂತೆ ಬ್ಯಾಟ್ ಬೀಸಿದ್ದ ಇಫ್ತಿಕಾರ್ ಅಹ್ಮದ್ ಝಾಂಪ ಸ್ಪಿನ್ ಬಲೆ ಗೆ ಎಲ್ ಬಿಡಬ್ಲೂ ಆದರು. ನಾಲ್ಕನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಬಂದಿದ್ದ ಮೊಹಮ್ಮದ್ ರಿಝ್ವಾನ್ 46 ರನ್ ಗಳಿಸಿ ತಂಡವನ್ನು ಗೆಲುವಿನವಿನ ದಡ ಸೇರಿಸುವ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಝಾಂಪ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಪಾಕ್ ಗೆಲುವಿನಿಂದ ದೂರ ಸರಿಯಿತು. ಬಳಿಕ ಬ್ಯಾಟಿಂಗ್ ಬಂದ ಮೊಹಮ್ಮದ್ ನವಾಝ್ 14 ಗಳಿಸಿದರೆ ಉಸಾಮ ಮಿರ್ ಶೂನ್ಯಕ್ಕೆ ಹೇಝಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಶಾಹಿನ್ ಅಫ್ರಿದಿ 10 ಗೆ ಔಟ್ ಆಗುವುದರೊಂದಿಗೆ ಪಾಕಿಸ್ತಾನ 305 ರನ್ ಗೆ ಆಲೌಟ್ ಆಯಿತು. ಹಸನ್ ಅಲಿ 8 ರನ್ ಗಳಿಸಿದರು.
ಅಸ್ಟ್ರೇಲಿಯಾ ಪರ ಆಡಂ ಝಾಂಪ 4 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೋನಿಸ್ ತಲಾ 2 ವಿಕೆಟ್ ಪಡೆದರು. ಮಿಷೆಲ್ ಸ್ಟಾರ್ಕ್, ಹೇಝಲ್ ವುಡ್ ಒಂದು ವಿಕೆಟ್ ಪಡೆದರು.
ಮೊದಲು ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡು ಆಸೀಸ್ ಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್ ಗೆ ಬಂದ ಆಸೀಸ್ ಆರಂಭಿಕರು ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. 259 ರನ್ ಗಳ ಬೃಹತ್ ಜೊತೆಯಾಟ ನಡೆಸಿದ ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಮಾರ್ಷ್ ಪರಸ್ಪರ ಸ್ಪೋಟಕ ಶತಕ ಬಾರಿಸಿ ಪಾಕ್ ಬೌಲರ್ ಗಳನ್ನು ದಂಡಿಸಿದರು. ಆಸೀಸ್ ಪರ ಮಿಷೆಲ್ ಮಾರ್ಷ್ 10 ಬೌಂಡರಿ 9 ಸಿಕ್ಸರ್ ಸಹಿತ 121 ಗಳಿಸಿದರು. ಆದರೆ 33.5 ಓವರ್ ನಲ್ಲಿ ಶಾಹೀನ್ ಆಫ್ರಿದಿ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ತಮ್ಮ ಅದ್ಭುತ ಇನ್ನಿಂಗ್ಸ್ ಮುಗಿಸಿದರು. ಆಕ್ರಮಣಕಾರಿ ಯಾಗಿ ಬ್ಯಾಟ್ ಬೀಸಿದ್ದ ಡೇವಿಡ್ ವಾರ್ನರ್ 14 ಬೌಂಡರಿ 9 ಸಿಕ್ಸರ್ ಸಹಿತ 131 ಸ್ಟ್ರೈಕ್ ರೇಟ್ ನಲ್ಲಿ 163 ರನ್ ಬಾರಿಸುವ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಬ್ಯಾಟಿಂಗ್ ಸ್ವರ್ಗ ಎಂಬುದನ್ನು ಸಾಬೀತು ಮಾಡಿ, ಹ್ಯಾರಿಸ್ ರವೂಫ್ ಬೌಲಿಂಗ್ ನಲ್ಲಿ ಶದಾಬ್ ಖಾನ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಬಳಿಕ ಬ್ಯಾಟಿಂಗ್ ಬಂದ ಬ್ಯಾಟರ್ ಗಳು ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಗ್ಲೇನ್ ಮಾಕ್ಸ್ ವೆಲ್ ಶೂನ್ಯಕ್ಕೆ ಶಾಹೀನ್ ಆಫ್ರಿದಿ ಗೆ ವಿಕೆಟ್ ಒಪ್ಪಿಸಿದರೆ ಸ್ಟೀವನ್ ಸ್ಮಿತ್ 7 ರನ್ ಗೆ ಕಾಟ್ ಅಂಡ್ ಬೌಲ್ಡ್ ಆದರು. ಜೋಸ್ ಇಂಗ್ಲಿಸ್ 13 ರನ್ ಗಳಿಸಿ ಮತ್ತೆ ಹ್ಯಾರಿಸ್ ರವೂಫ್ ಗೆ ವಿಕೆಟ್ ನೀಡಿದರು. ಮಾರ್ಕಸ್ ಸ್ಟೋನಿಷ್ 21 ರನ್ ಗೆ ಶಾಹೀನ್ ಆಫ್ರಿದಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಆದರು. ಮಾರ್ನಸ್ ಲಬುಶೇನ್ 8, ಸ್ಟಾರ್ಕ್ 2, ಹೇಝಲ್ ವುಡ್ ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿದರು. ಪ್ಯಾಟ್ ಕಮಿನ್ಸ್ 6 ರನ್ ಗಳಿಸಿದ್ದರು. ಝಾಂಪ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.
ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 5 ವಿಕೆಟ್ ಸಾಧನೆ ಮಾಡಿದರು.ಹ್ಯಾರಿಸ್ ರವೂಫ್ 3, ಉಸಾಮ ಮಿರ್ 1 ವಿಕೆಟ್ ಕಬಳಿಸಿದರು. ಶಾಹೀನ್ ಅಫ್ರಿದಿ 10 ಒವರ್ ಗಳಲ್ಲಿ ಒಂದು ಮೇಡನ್ ಸಹಿತ, 54 ರನ್ ನೀಡಿ 5 ವಿಕೆಟ್ ಪಡೆದರು. ಆ ಮೂಲಕ 2023 ರ ವಿಶ್ವಕಪ್ ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು.