ಝಿಂಬಾಬ್ವೆಯ ವಿಶ್ವಕಪ್ ಆಡುವ ಕನಸು ಭಗ್ನ, ಸ್ಕಾಟ್ ಲ್ಯಾಂಡ್ ವಿರುದ್ಧ ಸೋಲು
Photo: twitter \ @CricketScotland
ಹರಾರೆ: ಎರಡನೇ ಬಾರಿ ವಿಶ್ವಕಪ್ ನ ಅರ್ಹತಾ ಸುತ್ತಿನ ಕೊನೆಯ ಹಂತದಲ್ಲಿ ಎಡವಿದ ಝಿಂಬಾಬ್ವೆ 2023ರ ವಿಶ್ವಕಪ್ ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ. ಝಿಂಬಾಬ್ವೆಗೆ ಈ ಬಾರಿ ವಿಶ್ವಕಪ್ ಟಿಕೆಟ್ ಗಿಟ್ಟಿಸಲು ಕೊನೆಯ 2 ಪಂದ್ಯಗಳ ಪೈಕಿ ಒಂದರಲ್ಲಿ ಜಯ ಸಾಧಿಸಬೇಕಾಗಿತ್ತು. ಆದರೆ 2018ರಂತೆಯೇ ಈ ನಿಟ್ಟಿನಲ್ಲಿ ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಸ್ಕಾಟ್ಲ್ಯಾಂಡ್ ತಂಡ 8 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಗೆಲ್ಲಲು 235 ರನ್ ಗುರಿ ಬೆನ್ನಟ್ಟಿದ ಝಿಂಬಾಬ್ವೆ ತಂಡ ರಿಯಾನ್ ಬರ್ಲ್ ಜೀವನಶ್ರೇಷ್ಠ ಇನಿಂಗ್ಸ್ ನ(83 ರನ್)ಹೊರತಾಗಿಯೂ 41.1 ಓವರ್ ಗಳಲ್ಲಿ 203 ರನ್ ಗಳಿಸಿ ಆಲೌಟಾಯಿತು. 33 ರನ್ಗ ಗೆ 3 ವಿಕೆಟ್ ಗಳನ್ನು ಕಬಳಿಸಿದ ಕ್ರಿಸ್ ಸೋಲ್ ಸ್ಕಾಟ್ಲ್ಯಾಂಡ್ ಗೆಲುವಿಗೆ ಕಾರಣರಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವ ಪಡೆದರು.
ಸ್ಕಾಟ್ಲ್ಯಾಂಡ್ ತಂಡ ಐರ್ಲ್ಯಾಂಡ್, ವೆಸ್ಟ್ಇಂಡೀಸ್ ನಂತರ ಇದೀಗ ಝಿಂಬಾಬ್ವೆಗೆ ಸೋಲುಣಿಸಿದೆ. ವಿಶ್ವಕಪ್ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಝಿಂಬಾಬ್ವೆಯ ಕನಸು ನುಚ್ಚುನೂರಾಗಿದೆ. ಈ ಬಾರಿ ವಿಶ್ವಕಪ್ಗೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿದ್ದ ಝಿಂಬಾಬ್ವೆ ಕೂದಲೆಳೆ ಅಂತರದಿಂದ ಮುಂದಿನ ಸುತ್ತಿಗೇರುವುದರಿಂದ ವಂಚಿತವಾಯಿತು.
ಝಿಂಬಾಬ್ವೆ ಎರಡನೇ ಬಾರಿ ಟೂರ್ನಮೆಂಟ್ ನಲ್ಲಿ ಮುಂದಿನ ಸುತ್ತಿಗೇರಲು ಕೊನೆಯ 2 ಪಂದ್ಯಗಳಲ್ಲಿ ಒಂದನ್ನು ಗೆಲ್ಲಬೇಕಾಗಿತ್ತು. ಆದರೆ ಎರಡನೇ ಬಾರಿಯೂ ವೈಫಲ್ಯ ಕಂಡಿದೆ. ಇದೀಗ 4 ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿರುವ ಸ್ಕಾಟ್ಲ್ಯಾಂಡ್ ವಿಶ್ವಕಪ್ ನಲ್ಲಿ ಸ್ಥಾನ ಪಡೆಯುವ ಹೆಚ್ಚಿನ ಅವಕಾಶ ಹೊಂದಿದೆ.