ಎಸೆಸೆಲ್ಸಿ ಫಲಿತಾಂಶ: ದ್ವಿತೀಯ ಸ್ಥಾನಕ್ಕೇರಿದ ದ.ಕ.
ಮಂಗಳೂರು, ಮೇ 9: ಎಸೆಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಟಾಪ್ 2ನೇ ಸ್ಥಾನಕ್ಕೇರಿದೆ. ಪ್ರಸಕ್ತ ಸಾಲಿನಲ್ಲಿ ಶೇ. 92.12 ಫಲಿತಾಂಶ ಪಡೆದಿರುವ ದ.ಕ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 29701 ವಿದ್ಯಾರ್ಥಿಗಳಲ್ಲಿ 27360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ವರ್ಷ ಅಂದರೆ 2022-23ನೆ ಎಸೆಸೆಲ್ಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ ಎ ಗ್ರೇಡ್‌ನೊಂದಿಗೆ 17ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಶೇಕಡಾವಾರು ಪ್ರಮಾಣದಲ್ಲಿ ಈ ಬಾರಿ ಗಣನೀಯ ಏರಿಕೆ ಕಂಡು ಬಂದಿದೆ. 2014ರಿಂದ ಕಳೆದ ವರ್ಷದವರೆಗಿನ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಇದೇ ಮೊದಲ ಬಾರಿಗೆ ಶೇ. 92.12 ಫಲಿತಾಂಶವನ್ನು ದ.ಕ. ಜಿಲ್ಲೆ ದಾಖಲಿಸುವ ಮೂಲಕ ಪಿಯುಸಿಯಲ್ಲಿ ಮಾತ್ರವಲ್ಲ, ಎಸೆಸೆಲ್ಸಿಯಲ್ಲಿಯೂ ದ.ಕ. ಜಿಲ್ಲೆ ಟಾಪ್ ಎಂಬುದನ್ನು ಸಾಬೀತುಪಡಿಸಿದೆ. ಫಲಿತಾಂಶದಲ್ಲಿ ಶೇ. 90ಕ್ಕಿಂತ ಮೇಲ್ಪಟ್ಟು ಸಾಧನೆಯು ಕಳೆದ ಸುಮಾರು ದಶಕದ ಬಳಿಕದ ಸಾಧನೆಯಾಗಿದ್ದು, ಇದು ದ.ಕ. ಜಿಲ್ಲೆಯ ಸಂಭ್ರಮಕ್ಕೆ ಕಾರಣವಾಗಿದೆ.
ಕೊರೋನ ಹಿನ್ನೆಲೆಯಲ್ಲಿ 2019-20ನೆ ಸಾಲಿನಿಂದ ಕಳೆದ ವರ್ಷದವರೆಗೆ (2023) ಎಸೆಸೆಲ್ಸಿ ಫಲಿತಾಂಶವನ್ನು ಗ್ರೇಡ್ ಆಧಾರದಲ್ಲಿ ಪ್ರಕಟಿಸಲಾಗುತ್ತಿತ್ತು. ಅದರಂತೆ ಕಳೆದ ವರ್ಷ ಎ ಗ್ರೇಡ್‌ನಲ್ಲಿದ್ದ ದ.ಕ. ಜಿಲ್ಲೆ ರಾಜ್ಯ ಮಟ್ಟದಲ್ಲಿ ಫಲಿತಾಂಶದಲ್ಲಿ 17ನೆ ಸ್ಥಾನದಲ್ಲಿತ್ತು.
ವರ್ಷ - ಶೇ. ಸ್ಥಾನ
2014-15 - 89.35 8
2015-16 - 88.12 3
2016-17 - 82.39 2
2017-18 - 85.61 4
2018-19 - 86.85 7
2019-20 - 79.04 ‘ಬಿ’
2020-21 - 99.93 ‘ಎ’
2021-22 - 88.08 ‘ಎ’
2022-23 - 89.52 ‘ಎ’
2023-24 - 92.12 2
‘ಈ ಬಾರಿ ಶೈಕ್ಷಣಿಕ ಸಾಲಿನ ಆರಂಭದಿಂದಲೇ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಶಿಕ್ಷಕರು ಹೆಚ್ಚಿನ ಮುತುವರ್ಜಿಯೊಂದಿಗೆ ತಂಡವಾಗಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ಎಸೆಸೆಲ್ಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಗಿದೆ. ಇದು ವಿದ್ಯಾರ್ಥಿಗಳ ಶ್ರಮದ ಜತೆಗೆ, ಪೋಷಕರ ಸಹಕಾರವೂ ಕಾರಣ.’
- ವೆಂಕಟೇಶ್ ಎಸ್. ಪಟಗಾರ, ಡಿಡಿಪಿಐ, ದ.ಕ.