ಮೂಡಿಗೆರೆ: ಆಸ್ತಿ ವಿಚಾರಕ್ಕೆ ತಂದೆ ಸೇರಿ ಇಬ್ಬರ ಹತ್ಯೆಗೈದ ಮಗ!
ಹಲ್ಲೆ ತಡೆಯಲು ಮುಂದಾದ ತಾಯಿ ಮೇಲೂ ದಾಳಿ
ಹತ್ಯೆಗೀಡಾದ ಕಾರ್ತಿಕ್ ಹಾಗೂ ಭಾಸ್ಕರ್ ಗೌಡ | ಆರೋಪಿ ಸಂತೋಷ್
ಚಿಕ್ಕಮಗಳೂರು, ಆ.14: ಆಸ್ತಿ ಮಾರಾಟ ಮಾಡಿದ ಹಣದ ವಿಚಾರಕ್ಕೆ ನಡೆದ ಮಾತುಕತೆ ವೇಳೆ ಕುಪಿತನಾದ ವ್ಯಕ್ತಿಯೋರ್ವ ಹೆತ್ತ ತಂದೆ ಹಾಗೂ ಮಧ್ಯವರ್ತಿಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಮೂಡಿಗೆರೆತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುಗುಂಡಿ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಮಧುಗುಂಡಿ ಗ್ರಾಮದ ನಿವಾಸಿ ಕಾರ್ತಿಕ್(45) ಹಾಗೂ ಭಾಸ್ಕರ್ ಗೌಡ (65) ಹತ್ಯೆಗೀಡಾದವರು ಎಂದು ತಿಳಿದು ಬಂದಿದೆ.
ಸಂತೋಷ್ (35) ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಆರೋಪಿ ತಾಯಿಗೆ ಕತ್ತಿ ಏಟು ಬಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮಧುಗುಂಡಿ ಗ್ರಾಮದ ನಿವಾಸಿ ಭಾಸ್ಕರ್ಗೌಡ ಅವರು ತಮ್ಮ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು. ಇದಕ್ಕೆ ಮಧುಗುಂಡಿ ಗ್ರಾಮದ ಕಾರ್ತಿಕ್ ಎಂಬವರು ಮಧ್ಯಸ್ತಿಕೆ ವಹಿಸಿ ಬೆಂಗಳೂರು ಮೂಲದವರಿಗೆ ಜಮೀನನ್ನು ಮಾರಾಟ ಮಾಡಿಸಿದ್ದರು. ಜಮೀನು ಕೊಂಡವರು ಭಾಸ್ಕರ್ ಗೌಡ ಅವರಿಗೆ ಮುಂಗಡವಾಗಿ 12ಲಕ್ಷ ರೂ. ನೀಡಿದ್ದರು. ರವಿವಾರ ರಾತ್ರಿ ಈ ಹಣದ ವಿಚಾರವಾಗಿ ಭಾಸ್ಕರ್ ಗೌಡ ಅವರ ಮನೆಯಲ್ಲಿ ಮಧ್ಯವರ್ತಿ ಕಾರ್ತಿಕ್, ಆರೋಪಿ ಸಂತೋಷ್ ಹಾಗೂ ಆತನ ತಂದೆ, ತಾಯಿ ಮಾತುಕತೆ ನಡೆಸುತ್ತಿದ್ದ ವೇಳೆ 12 ಲಕ್ಷ ಹಣದ ಬಗ್ಗೆ ಸಂತೋಷ್ ಪ್ರಶ್ನಿಸಿದ್ದಾನೆ. ಈ ವೇಳೆ ಹಣವನ್ನು ಭಾಸ್ಕರ್ ಗೌಡ ಅವರ ಎರಡನೇ ಮಗ ಶಿವಕುಮಾರ್ ಬಳಿ ನೀಡಿರುವುದಾಗಿ ಕಾರ್ತಿಕ್ ಹೇಳಿದ್ದಾರೆಂದು ತಿಳಿದು ಬಂದಿದೆ.
ಇದರಿಂದ ಕುಪಿತನಾದ ಸಂತೋಷ್ ಮನೆಯೊಳಗಿನಿಂದ ಕತ್ತಿಯನ್ನು ತಂದು ಕುರ್ಚಿ ಮೇಲೆ ಕುಳಿತಿದ್ದ ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಕಾರ್ತಿಕ್ ತೀವ್ರ ರಕ್ರಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದ್ದು, ಹಲ್ಲೆ ಬಿಡಿಸಲು ಬಂದ ತಂದೆ ಭಾಸ್ಕರ್ ಗೌಡ ಹಾಗೂ ತಾಯಿಯ ಮೇಲೂ ಸಂತೋಷ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಮಗನಿಂದ ಹಲ್ಲೆಗೊಳಗಾದ ಭಾಸ್ಕರ್ ಗೌಡ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತದಾರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನೆ ವೇಳೆ ಹಲ್ಲೆಯನ್ನು ತಡೆಯಲು ಬಂದ ತಾಯಿ ಮೇಲೂ ಸಂತೋಷ್ ಹಲ್ಲೆ ಮಾಡಿದ್ದು, ಕತ್ತಿ ಏಟಿನಿಂದ ಗಾಯಗೊಂಡಿರುವ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನೆ ಬಳಿಕ ಆರೋಪಿ ಸಂತೋಷ್ ಬಾಳೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆಂದು ತಿಳಿದು ಬಂದಿದೆ. ಬಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.