ನಿಗಮ ಮಂಡಳಿಗಳಿಗೆ ಮಾಜಿ ಸಚಿವರು-ಶಾಸಕರ ನೇಮಕ ಬೇಡ: ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ
ಬೆಂಗಳೂರು: ರಾಜ್ಯ ಸರಕಾರವು ನಿಗಮ, ಮಂಡಳಿಗಳಿಗೆ ಮಾಜಿ ಸಚಿವರು, ಶಾಸಕರು ಹಾಗೂ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳನ್ನು ನೇಮಕ ಮಾಡದೆ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಚಾರ ಸಮಿತಿಗಳ ಪದಾಧಿಕಾರಿಗಳ ಸಮಾವೇಶದಲ್ಲಿ ಈ ಆಗ್ರಹ ಕೇಳಿ ಬಂದಿತು.
2013ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೂ ಸುಮಾರು ಎರಡು ವರ್ಷಗಳ ಕಾಲ ಯಾವುದೆ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡಿರಲಿಲ್ಲ. ಈ ಬಾರಿ ಆ ರೀತಿ ಆಗಬಾರದು. ಆದಷ್ಟು ಬೇಗ ನಿಗಮ, ಮಂಡಳಿಗಳಿಗೆ ನೇಮಕ ಮಾಡಿ, ಕಾರ್ಯಕರ್ತರಿಗೆ ಅಧಿಕಾರ ಸಿಗುವಂತೆ ಮಾಡಬೇಕು. ಇದರಿಂದ, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಕಾರ್ಯಕರ್ತರು ಸಲಹೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಅನ್ಯ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಲಾಗುತ್ತದೆ. ನಮ್ಮ ಪರಿಶ್ರಮದಿಂದ ಅವರು ಗೆದ್ದು, ಅಧಿಕಾರ ಅನುಭವಿಸುತ್ತಾರೆ. ನಂತರ, ಮುಂದಿನ ಚುನಾವಣೆ ವೇಳೆಗೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಆದರೆ, ಕಷ್ಟಪಟ್ಟು ದುಡಿಯುವ ಕಾರ್ಯಕರ್ತರಿಗೆ ಮಾತ್ರ ಯಾವುದೆ ಅಧಿಕಾರ ಸಿಗುವುದಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಕಾರ್ಯಕರ್ತರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ಆದಷ್ಟು ಬೇಗ ನೇಮಕ ಮಾಡಬೇಕು. ಅಲ್ಲದೆ, ಕನಿಷ್ಠ ಎರಡೂವರೆ ವರ್ಷ ಅವರಿಗೆ ಅಧಿಕಾರ ಸಿಗುವಂತೆ ಇರಬೇಕು. ಶಾಸಕರಿಗಿಂತ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ನಿಗಮ, ಮಂಡಳಿಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಮಹಿಳೆಯರಿಗೆ ಆದ್ಯತೆ ನೀಡಬೇಕು. ಮಾಜಿ ಸಚಿವರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತವಲ್ಲ. ಸಚಿವರು, ಶಾಸಕರು ಹಾಗೂ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಲು ರಾಜ್ಯಮಟ್ಟದಲ್ಲಿ ಒಂದು ಸಮಿತಿ ರಚಿಸಿದರೆ ಉತ್ತಮ ಎಂದು ಶಂಕರ್ ತಿಳಿಸಿದರು.
ತಾಲೂಕು, ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಪಾದಯಾತ್ರೆ ಮಾಡಬೇಕು. ಈ ವೇಳೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಫಲಾನುಭವಿಗಳ ಸಮಾವೇಶಗಳನ್ನು ಮಾಡಬೇಕು. ಮುಖ್ಯಮಂತ್ರಿಯಿಂದ ಫಲಾನುಭವಿಗಳಿಗೆ ಪತ್ರ ಹೋಗುವಂತೆ ಮಾಡಬೇಕು ಎಂದು ಅವರು ಹೇಳಿದರು.