ಟೊಮೆಟೊ ಬೆಲೆ ಏರಿಕೆ: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ದಾಖಲೆಯ 1.24 ಕೋಟಿ ರೂ. ಸೆಸ್ ಸಂಗ್ರಹ
Photo - PTI
ಕೋಲಾರ, ಆ.1: ಟೊಮೆಟೊ ದರ ಏರಿಕೆಯಿಂದಾಗಿ ಕೋಲಾರದ (ಎಪಿಎಂಸಿ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜುಲೈ ಒಂದೇ ತಿಂಗಳಲ್ಲಿ 1.24 ಕೋಟಿ ರೂಪಾಯಿ ದಾಖಲೆಯ ಸೆಸ್ ಸಂಗ್ರಹವಾಗಿದೆ.
ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾದ ದಾಖಲೆಯ ಬಳಕೆದಾರರ ಶುಲ್ಕ ಇದಾಗಿದ್ದು, ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆ ಜುಲೈನಲ್ಲಿ 3 ಲಕ್ಷ 12 ಸಾವಿರ ಕ್ವಿಂಟಲ್ ಟೊಮೆಟೊ ಆವಕವಾಗಿದೆ. ಅಂದರೆ 15 ಕೆ.ಜಿ. ತೂಕದ 20 ಲಕ್ಷ 83 ಸಾವಿರ ಟೊಮೆಟೊ ಬಾಕ್ಸ್ ಗಳು ಹರಾಜಿನಲ್ಲಿ ಮಾರಾಟವಾಗಿದ್ದು,ಇಲ್ಲಿಯ ತನಕ 15 ಕೆ.ಜಿ.ಯ ಒಂದು ಬಾಕ್ಸ್ ಗರಿಷ್ಠ 2,700 ರೂ.ಗೆ ಹರಾಜಾಗಿರುವುದು ಗರಿಷ್ಠ ದಾಖಲೆಯಾಗಿದೆ.
ಇದೇ ಅವಧಿಯಲ್ಲಿ 2022ರ ಜುಲೈನಲ್ಲಿ ಇದಕ್ಕಿಂತ ಮೂರು ಪಟ್ಟು ಅಧಿಕ ಪ್ರಮಾಣದ ಟೊಮೆಟೊ ಮಾರಾಟವಾಗಿತ್ತು. ಕಳೆದ ಸಾಲಿನ ಇದೇ ತಿಂಗಳಲ್ಲಿ ಸುಮಾರು 10 ಲಕ್ಷ 51 ಸಾವಿರ ಕ್ವಿಂಟಾಲ್ ಟೊಮೆಟೊ ಆವಕವಾಗಿತ್ತು. 65 ಲಕ್ಷ 84 ಸಾವಿರ ಸೆಸ್ ಸಂಗ್ರಹವಾಗಿತ್ತು. ಪ್ರತಿ ಕೆಜಿಗೆ ಗರಿಷ್ಟ ರೂ.120ಕ್ಕೆ ಮಾರಾಟವಾಗಿದ್ದರೂ ಇಷ್ಟೊಂದು ಸೆಸ್ ಸಂಗ್ರಹವಾಗಿರಲಿಲ್ಲ. ಪ್ರತಿ 100 ರೂಪಾಯಿ ವಹಿವಾಟಿಗೆ 60 ಪೈಸೆ ಸೆಸ್ ಸಂಗ್ರಹ ಮಾಡಲಾಗುತ್ತಿದೆ.
ಈ ಗರಿಷ್ಠ ಮಟ್ಟದ ದಾಖಲೆಯ ಸೆಸ್ ಸಂಗ್ರಹ ರೈತರು, ವರ್ತಕರು, ಕಮಿಷನ್ ಏಜೆಂಟರು ಹಾಗೂ ಎಪಿಎಂಸಿಗೆ ಶುಭ ಒಳ್ಳೆಯ ಸುದ್ದಿ. ಟೊಮೆಟೊ ಬೆಲೆ ಏರಿಕೆ ಕಾರಣ ಒಂದು ತಿಂಗಳಿನಿಂದ ಎಲ್ಲರಿಗೂ ಲಾಭವಾಗಿದೆ. ಮುಂದಿನ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳವರೆಗೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಎಪಿಎಂಸಿ ಮಟ್ಟಿಗೆ ಇದೊಂದು ಉತ್ತಮ ಬೆಳವಣಿಗೆ. ಎಪಿಎಂಸಿ ಆಡಳಿತ ಕಾರ್ಯದರ್ಶಿಯಾಗಿ ನನಗಂತೂ ತುಂಬಾ ಖುಷಿಯಾಗಿದೆ. ಒಂದು ತಿಂಗಳಿನಲ್ಲಿ ಯಾವತ್ತೂ ಇಷ್ಟು ಬಳಕೆದಾರರ ಶುಲ್ಕ ಸಂಗ್ರಹವಾಗಿರಲಿಲ್ಲ. ಇದು ಮುಂದಿನ ತಿಂಗಳು ಮುಂದುವರಿಯುವ ಸಾಧ್ಯತೆ ಇದೆ.
ವಿಜಯಲಕ್ಷ್ಮೀ, ಕೋಲಾರ ಎಪಿಎಂಸಿ ಕಾರ್ಯದರ್ಶಿ