ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಪ್ರಕಟ | ಯಾರ‍್ಯಾರಿಗೆ ಮಣೆ, ಯಾರ‍್ಯಾರು ಮನೆಗೆ?
ಬೆಂಗಳೂರು: ಬಿಜೆಪಿಯ ಎರಡನೇ ಪಟ್ಟಿಯಲ್ಲಿ ರಾಜ್ಯದ 20 ಲೋಕಸಭಾ ಸ್ಥಾನಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸಿ ಪಟ್ಟಿ ಪ್ರಕಟಿಸಲಾಗಿದೆ. ಸ್ಪರ್ಧೆಗೆ ಕ್ಷೇತ್ರದ ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಿಸಿದ್ದ ಶೋಭಾ ಕರಂದ್ಲಾಜೆ ಅವರಿಗೆ ಬದಲಿ ಕ್ಷೇತ್ರ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್ ಚೌಟ ಅವರನ್ನು ಅಚ್ಚರಿಯ ಅಭ್ಯರ್ಥಿಯನ್ನಾಗಿ ಆರಿಸಲಾಗಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ಪ್ರಮುಖ ಅಭ್ಯರ್ಥಿಗಳು :
ಬೆಂಗಳೂರು ಗ್ರಾಮಾಂತರಕ್ಕೆ ಡಾ.ಸಿ ಎನ್ ಮಂಜುನಾಥ್
ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಖ್ಯಾತ ವೈದ್ಯ, ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿ.ಎನ್ ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಹೇಳಲಾಗುವ ಈ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿ ಹಾಲಿ ಸಂಸದ ಡಿ.ಕೆ ಸುರೇಶ್ ಅವರನ್ನು ಎದುರಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ ಮಂಜುನಾಥ್ ಅವರು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬ ಕುತೂಹಲವಿದೆ.
ದಕ್ಷಿಣ ಕನ್ನಡದಲ್ಲಿ ಟಿಕೆಟ್ ಕಳೆದುಕೊಂಡ ನಳಿನ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗು ಸತತ ಮೂರು ಬಾರಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ ಯುವ ನಾಯಕ ಬ್ರಜೇಶ್ ಚೌಟ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳ ಬಿ. ಫಾರ್ಮ್ ಗೆ ಸಹಿ ಮಾಡಿ ಹಸ್ತಾಂತರಿಸಿದ್ದ ನಳಿನ್ ಈ ಬಾರಿ ಸ್ವತಃ ಟಿಕೆಟ್ ಕಳೆದುಕೊಂಡಿದ್ದಾರೆ. ನಾನು ಪಕ್ಷ ಹೇಳಿದರೆ ಗುಡಿಸಲೂ ರೆಡಿ ಒರೆಸಲೂ ರೆಡಿ ಎಂದು ಅವರು ನಿನ್ನೆಯಷ್ಟೇ ಹೇಳಿಕೆ ಕೊಟ್ಟಿದ್ದರು. ಕ್ಷೇತ್ರದಲ್ಲಿ ಅವರ ಬಗ್ಗೆ ಪಕ್ಷದ ಒಳಗೇ ಇದ್ದ ಅಸಮಾಧಾನ ಹಾಗೂ ಕಾರ್ಯಕರ್ತರ ಆಗ್ರಹವೇ ಟಿಕೆಟ್ ತಪ್ಪಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ನಳಿನ್ ಗೆ ಕುಮಾರ್ ಕಟೀಲ್ ಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಅರುಣ್ ಕುಮಾರ್ ಪುತ್ತಿಲ ಅವರ ಸ್ವತಂತ್ರ ಸ್ಪರ್ಧೆಯನ್ನು ತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕಿದಂತಿದೆ. ಮೂಲಗಳ ಪ್ರಕಾರ ದಕ್ಷಿಣ ಕನ್ನಡದಲ್ಲಿ ನಳಿನ್ ಬಿಟ್ಟು ಬೇರೆ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನ ಪ್ರದರ್ಶನಕ್ಕೆ ಕಾರ್ಯಕರ್ತರು ಸಿದ್ಧ, ಎನ್ನುವ ಮಾತು ಕೇಳಿ ಬಂದಿತ್ತು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭ, ನಳಿನ್ ವಿರುದ್ಧ ಕಾರ್ಯಕರ್ತರ ಆಕ್ರೋಶ ಬೀದಿಗೆ ಬಂದಿತ್ತು. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಕಾರ್ಯಕರ್ತರು ಬಹಿರಂಗ ಹೇಳಿಕೆ ನೀಡಿದ್ದರು. ಈಗ ಎರಡನೇ ಪಟ್ಟಿಯಲ್ಲಿ ಹ್ಯಾಟ್ರಿಕ್ ಸಂಸದ ನಳಿನ್ ಗೆ ಟಿಕೆಟ್ ತಪ್ಪಿದೆ.
2009 ರಲ್ಲೀ ಕಾರ್ಯಕರ್ತ ನಳಿನ್ ರನ್ನು ಅಚ್ಚರಿಯ ಅಭ್ಯರ್ಥಿ ಮಾಡಿದ್ದ ಬಿಜೆಪಿ ಈ ಬಾರಿ ಬ್ರಿಜೇಶ್ ಚೌಟ ಅವರನ್ನು ಅಚ್ಚರಿಯ ಆಯ್ಕೆಯಾಗಿ ಘೋಷಿಸಿದೆ.
ಮೈಸೂರು – ಕೊಡಗಿಗೆ ಯದುವೀರ್
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಇನ್ನೊಬ್ಬ ಪ್ರಖರ ಹಿಂದುತ್ವ ನಾಯಕ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸತತ ಎರಡು ಬಾರಿ ಗೆದ್ದು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪುವ ವದಂತಿ ಕಳೆದ ಮೂರ್ನಾಲ್ಕು ದಿನಗಳಿಂದಲೇ ಕೇಳಿಬರುತ್ತಿತ್ತು. ಅದೀಗ ನಿಜವಾಗಿದೆ. ಅವರ ಬದಲು ಮೈಸೂರು ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಪತ್ರಕರ್ತ, ಅಂಕಣಕಾರರಾಗಿದ್ದ ಪ್ರತಾಪ್ ಸಿಂಹ ಹೇಗೆ ದಿಢೀರನೇ ಟಿಕೆಟ್ ಪಡೆದು ಬಿಜೆಪಿ ಸಂಸದರಾದರೋ ಅಷ್ಟೇ ಹಠಾತ್ ಆಗಿ ಈಗ ಟಿಕೆಟ್ ಕಳಕೊಂಡಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದಿರುವ ಪ್ರತಾಪ್ ಸಿಂಹ ಯದುವೀರ್ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.
ಉಡುಪಿ – ಚಿಕ್ಕಮಗಳೂರಿನಲ್ಲಿ ನೇರ ಚುನಾವಣೆಗಿಳಿದ ಕೋಟಾ
ಉಡುಪಿ ಚಿಕ್ಕಮಗಳೂರಿಗೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಂಘ ಪರಿವಾರದ ಅಚ್ಚುಮೆಚ್ಚಿನ, ಕಾರ್ಯಕರ್ತರ ಇಷ್ಟದ ನಾಯಕ ಶ್ರೀನಿವಾಸ ಪೂಜಾರಿ ಇದೇ ಮೊದಲ ಬಾರಿ ನೇರ ಚುನಾವಣೆ ಎದುರಿಸುತ್ತಿದ್ದಾರೆ. ಅವರು ಈವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇಲ್ಲಿನ ಹಾಲಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆಯವರ ಬಗ್ಗೆ ಪಕ್ಷದೊಳಗೇ ಅಸಮಾಧಾನವಿತ್ತು. ಗೋ ಬ್ಯಾಕ್ ಶೋಭಾ ಎಂದು ಬಹಿರಂಗವಾಗಿ ಕಾರ್ಯಕರ್ತರು ಶೋಭಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು.
ಬೆಂಗಳೂರು ಉತ್ತರಕ್ಕೆ ಹೋದ ಶೋಭಾ ಕರಂದ್ಲಾಜೆ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರಕ್ಕೆ ಬಿಜೆಪಿ ಟಿಕೆಟ್ ನೀಡಿದೆ. ತಮ್ಮ ಹಾಲೀ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದೊಳಗೆ ಪ್ರತಿರೋಧ ಎದುರಾದರೂ ಸ್ಪರ್ಧಿಸುವುದು ಖಚಿತ ಎಂದಿದ್ದ ಶೋಭಾ, ಅವರನ್ನು ಪಕ್ಷವು ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರಕ್ಕೆ ಕಳುಹಿಸಿದೆ.
ಅಲ್ಲಿ ಹಾಲಿ ಸಂಸದರಾಗಿದ್ದ ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಅವರನ್ನು ಕೈ ಬಿಡಲಾಗಿದೆ. ಅವರು ನಿನ್ನೆಯಷ್ಟೇ ನಮ್ಮನ್ನು ಅವಮಾನಿಸಲಾಗುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದರು.
ಹಾವೇರಿಯಲ್ಲಿ ಮಾಜಿ ಸಿಎಂ ಅಗ್ನಿಪರೀಕ್ಷೆ
ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಈ ಕ್ಷೇತ್ರಕ್ಕೆ ತಮ್ಮ ಪುತ್ರನಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಕೆ ಎಸ್ ಈಶ್ವರಪ್ಪ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗುವ ಸಾಧ್ಯತೆಯಿದೆ. ಹಾವೇರಿಯಲ್ಲಿ ಈಶ್ವರಪ್ಪ ಚುನಾವಣಾ ಪ್ರಚಾರವನ್ನೂ ಪ್ರಾರಂಭಿಸಿದ್ದರು. ಟಿಕೆಟ್ ಕೊಟ್ಟೇ ಕೊಡ್ತಾರೆ, ಕೊಡದಿದ್ದರೆ ನಾನು ನನ್ನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ತುಮಕೂರಿಗೆ ಲಿಂಗಾಯತ ನಾಯಕ ಸೋಮಣ್ಣ
ನಿರೀಕ್ಷೆಯಂತೆ ತುಮಕೂರಿನ ಟಿಕೆಟ್ ಪಡೆಯುವಲ್ಲಿ ಮಾಜಿ ಸಚಿವ ವಿ ಸೋಮಣ್ಣ ಯಶಸ್ವಿಯಾಗಿದ್ದಾರೆ. ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ ಟಿಕೆಟ್ ಸಿಗಬಹುದು ಎಂದು ಹರಡಿದ್ದ ವದಂತಿಗೆ ಈ ಮೂಲಕ ತೆರೆ ಬಿದ್ದಿದೆ. ವಿಧಾನಸಭಾ ಸೋಲಿನಿಂದ ಕಂಗೆಟ್ಟಿದ್ದ ಸೋಮಣ್ಣ ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಒಂದು ಹಂತದಲ್ಲಿ ಪಕ್ಷ ತ್ಯಜಿಸುವ ನಿರ್ಧಾರಕ್ಕೂ ಬಂದಿದ್ದರು ಎನ್ನಲಾಗಿದೆ. ಪಕ್ಷದ ಸಾಂಪ್ರದಾಯಿಕ ಮತಗಳಾದ ಲಿಂಗಾಯತ ಸಮುದಾಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸೋಮಣ್ಣ ಅವರಿಗೆ ತುಮಕೂರಿನಿಂದ ಟಿಕೆಟ್ ನೀಡಿದೆ. ಹಾಲಿ ಸಂಸದ ಬಸವರಾಜು ಟಕೆಟ್ ಬೇಡ ಎಂದಿದ್ದರು.
ಚಾಮರಾಜನಗರದಲ್ಲಿ ಹೊಸ ಮುಖಕ್ಕೆ ಮಣೆ
ಚಾಮರಾಜನಗರ ಮೀಸಲು ಕ್ಷೇತ್ರದ ಹಾಲಿ ಸಂಸದ ಮಾಜಿ ಕೇಂದ್ರ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಅವರು ವಯಸ್ಸಿನ ಕಾರಣದಿಂದ ಹಿಂದೆ ಸರಿದಿದ್ದು ಅಲ್ಲಿ ಎಸ್ ಬಾಲರಾಜ್ ಅವರಿಗೆ ಟಿಕೆಟ್ ಕೊಡಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಸ್. ಬಾಲರಾಜು ಜಿಲ್ಲೆಯ ಯಳಂದೂರು ತಾಲ್ಲೂಕಿನ ಮದ್ದೂರಿನವರು. ಮೂಲತಃ ಕಾಂಗ್ರೇಸ್ ನಿಂದ ರಾಜಕೀಯಕ್ಕೆ ಬಂದವರು . ಮಾಜಿ ಕೇಂದ್ರ ಸಚಿವ ಎಂ. ರಾಜಶೇಖರ ಮೂರ್ತಿ ಯವರ ಗರಡಿಯಲ್ಲಿ ಬೆಳೆದ ಇವರು, 1999 ರಲ್ಲಿ ಪಕ್ಷೇತರರಾಗಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ ಕೆಜಿಪಿ ಯಿಂದ ಸ್ಪರ್ದೆ ಮಾಡಿ ಪರಾಭವಗೊಂಡು. ಮತ್ತೆ ಕಾಂಗ್ರೇಸ್ ಸೇರ್ಪಡೆಗೊಂಡಿದ್ದರು. 2023 ರಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೇಟ್ ಕೈ ತಪ್ಪಿದ್ದರಿಂದ ಕಾಂಗ್ರೆಸ್ ತೊರೆದು ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ದಾವಣಗೆರೆಯಲ್ಲಿ ಸಿದ್ದೇಶ್ವರ ಪತ್ನಿಗೆ ಟಿಕೆಟ್
ದಾವಣಗೆರೆಯಲ್ಲಿ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಡಲಾಗಿದೆ. ಜಿಲ್ಲೆಯಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ದ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಮಾಜಿ ಸಚಿವ ರೇಣುಕಾಚಾರ್ಯ ಅವರು ಮಾಜಿ ಶಾಸಕ ಗುರುಸಿದ್ದನಗೌಡ ಅವರ ಮಗ ಡಾ.ರವಿಕುಮಾರ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದರು. ಅಲ್ಲದೇ ಎಸ್ ಎ.ರವೀಂದ್ರನಾಥ, ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಗುರುಸಿದ್ದನಗೌಡ ಸೇರಿದಂತೆ ಅನೇಕ ಮುಖಂಡರು ಸಿದ್ದೇಶ್ವರ ಅವರಿಗೆ ಈ ಬಾರಿ ಟಿಕೆಟ್ ನೀಡದಂತೆ ನಿಯೋಗ ತೆರಳಿ ವರಿಷ್ಠರಿಗೆ ಮನವಿ ನೀಡಿ ಬಂದಿದ್ದರು.
ಅದರೆ ಈಗ ಅವರ ಪತ್ನಿಗೆ ಹೈಕಮಾಂಡ್ ಮಣಿ ಹಾಕಿದೆ. ಅದರೆ ಬಂಡಾಯ ಮಾತ್ರ ಶಮನವಾಗಿಲ್ಲ. ಇದನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವುದೇ ಬಿಜೆಪಿಗೆ ಸವಾಲಾಗಿದೆ.
ಜಿಲ್ಲೆಯಲ್ಲಿ ಡಾ.ರವಿಕುಮಾರ್, ಕೊಟ್ರೇಶ್ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಟಿಕೆಟ್ ಅಕಾಂಕ್ಷಿಗಳಾಗಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು, ಅದರೆ, ಬಿಜೆಪಿ ಹೈಕಮಾಂಡ್ ಮತ್ತೆ ಸಿದ್ದೇಶ್ವರ ಅವರ ಬದಲು ಕುಟುಂಬಕ್ಕೆ ಟಿಕೆಟ್ ನೀಡುವ ಮೂಲಕ ಆಕಾಂಕ್ಷಿಗಳಿಗೆ ಶಾಕ್ ನೀಡಿದೆ.
ಕಲಬುರಗಿಗೆ ಮತ್ತೆ ಜಾಧವ್
ಡಾ .ಉಮೇಶ್ ಜಾಧವ್ 2019 ರಿಂದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದಾರೆ. 2019 ರಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿ, ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಜಾಧವ್ ಮತ್ತೆ ಬಿಜೆಪಿ ಟಿಕೆಟ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.
ವಿಜಯಪುರ ಬಿಡದ ರಮೇಶ್ ಜಿಗಜಿಣಗಿ
ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ರಮೇಶ್ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಒಲಿದು ಬಂದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಟಿಕೆಟ್ ಕೈ ತಪ್ಪಲಿದೆ ಎಂಬ ವದಂತಿಗಳು ಸದ್ದು ಮಾಡಿದ ಬೆನ್ನಲ್ಲೇ ನಿನ್ನೆಯಷ್ಟೇ ಸಂಸದ ಜಿಗಜಿಣಗಿ ತಮಗೆ ಟಿಕೆಟ್ ಪಕ್ಕಾ ಎಂದು ಭರವಸೆಯ ಮಾತುಗಳನ್ನಾಡುವ ಮೂಲಕ ಟಿಕೆಟ್ ತಪ್ಪುವುದಿಲ್ಲ ಎಂದು ಹೇಳಿದ್ದರು.
ಹಾಗೆಯೇ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧೆಗೆ ಉತ್ಸಾಹದಿಂದ ಅಣಿಯಾಗಿದ್ದಾರೆ. ಹಾಲಿ ಸಂಸದರಾಗಿರುವ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ. 1957 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೂ ರಮೇಶ ಜಿಗಜಿಣಗಿ ಹೊರತುಪಡಿಸಿ ಯಾರೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸಿಲ್ಲ. ಈಗ ನಾಲ್ಕನೇಯ ಬಾರಿಗೆ ಜಿಗಜಿಣಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ವಿರೋಧದ ನಡುವೆಯೇ ಬೀದರ್ ನಲ್ಲಿ ಖೂಬಾ ಗೆ ಟಿಕೆಟ್
ಬೀದರ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಸ್ವ ಪಕ್ಷದ ವಿರೋಧದ ನಡುವೆಯೂ ಟಿಕೆಟ್ ಘೋಷಣೆಯಾಗಿದೆ. ಈ ಹಿಂದೆ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು, ನನ್ನ ಹತ್ಯೆಗೆ ಕೇಂದ್ರ ಸಚಿವ ಭಗವಂತ ಖೂಬಾ ಸಂಚು ರೂಪಿಸಿದ್ದಾರೆ, ನನ್ನನ್ನು ಕೊಲೆ ಮಾಡಿ 6 ತಿಂಗಳಲ್ಲಿ ಉಪ ಚುನಾವಣೆ ನಡೆಸಲು ಕುತಂತ್ರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಮಾಜಿ ಸಚಿವ ಪ್ರಭು ಚೌಹಾಣ್ ಹಾಗೂ ಶಾಸಕ ಶರಣು ಸಲಗರ ಅವರು ಭಗವಂತ್ ಖೂಬಾ ಸ್ಪರ್ಧಿಸುವಂತಿಲ್ಲ, ಖೂಬಾ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು.
ಶಿವಮೊಗ್ಗದಲ್ಲಿ ಮತ್ತೆ ಬಿಎಸ್ವೈ ಪುತ್ರನಿಗೆ ಮಣೆ
ಬಹು ನಿರೀಕ್ಷೆಯಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್, ಹಾಲಿ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗನಾಗಿರುವ ಬಿ.ವೈ. ರಾಘವೇಂದ್ರ 2009 ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನು 52,893 ಮತಗಳ ಅಂತರದಿಂದ ಸೋಲಿಸಿ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದ ತಂದೆ ಯಡಿಯೂರಪ್ಪನವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ದೊಡ್ಡ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದರು.
ನಂತರ 2018ರ ಲೋಕಸಭಾ ಉಪಚುನಾವಣೆಯಲ್ಲಿ ಎಸ್. ಬಂಗಾರಪ್ಪನವರ ಮಗ ಮಧು ಬಂಗಾರಪ್ಪ ಅವರನ್ನು 47,388 ಮತಗಳ ಅಂತರದಿಂದ ಸೋಲಿಸಿ ಸಂಸದರಾದರು. ಈಗ ಅವರು ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಎದುರಿಸಲಿದ್ದಾರೆ.
ಕೊಪ್ಪಳ
ಕೊಪ್ಪಳದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಅವರ ಬದಲಿಗೆ ಡಾ. ಬಸವರಾಜ್ ಕ್ಯಾವತೋರ್ ಅವರಿಗೆ ಮಣೆ ಹಾಕಲಾಗಿದೆ