ಎಂಟು ದಿನಗಳ ಪಾದಯಾತ್ರೆ ರೂಟ್ ಮ್ಯಾಪ್ ಸಿದ್ಧ, ಆ.3ರಂದು ಚಾಲನೆ: ವಿಜಯೇಂದ್ರ
ಬೆಂಗಳೂರು, ಆ.2: ಕಾಂಗ್ರೆಸ್ ಪಕ್ಷ- ಸರಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಿಜೆಪಿ ಮತ್ತು ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಜಂಟಿಯಾಗಿ ನಡೆಸುವ ಮೈಸೂರು ಚಲೋ ಪಾದಯಾತ್ರೆಗೆ ಆ.3ರಂದು ಬೆಳಗ್ಗೆ ಚಾಲನೆ ಸಿಗಲಿದೆ ಎಂದರು.
ಅಹಿಂದ ಹೆಸರಿನಿಂದ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಆ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದೆ. ಪರಿಶಿಷ್ಟರ ಹಣ ಲೂಟಿ ಮಾಡಿದೆ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಸದನದ ಒಳಗೆ ಮತ್ತು ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡಿ, ಸರಕಾರವನ್ನು ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ. ಹಗರಣ, ಭ್ರಷ್ಟಾಚಾರ ಸಂಬಂಧ ನಮ್ಮ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೊದಲು ಉತ್ತರಿಸಲಿ ಎಂದು ಅವರು ತಿಳಿಸಿದರು.
8 ದಿನಗಳ ಪಾದಯಾತ್ರೆ
ಮಾಜಿ ಮುಖ್ಯಮಂತ್ರಿ- ರೈತ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶನಿವಾರ ಪಾದಯಾತ್ರೆಗೆ ಚಾಲನೆ ಕೊಡುತ್ತಾರೆ. ಶನಿವಾರ ಬೆಳಗ್ಗೆ 8:30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಮಂಜುನಾಥ ಕನ್ವೆನ್ಶನ್ ಹಾಲ್ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. 8 ದಿನಗಳ ಪಾದಯಾತ್ರೆ ಇದಾಗಿರುತ್ತದೆ ಎಂದು ವಿಜಯೇಂದ್ರ ವಿವರಿಸಿದರು.
ನಾಳೆ ಸುಮಾರು 16 ಕಿ.ಮೀ. ಪಾದಯಾತ್ರೆ ಇರಲಿದೆ. ಎರಡನೇ ದಿನ ರವಿವಾರ ಮಂಜುನಾಥ ಕನ್ವೆನ್ಶನ್ ಹಾಲ್ ಬಿಡದಿಯಿಂದ ಆರಂಭಗೊಂಡು 22 ಕಿ.ಮೀ., 5ರಂದು ಕೆಂಗಲ್ ಕೆವಿಕೆ ಕನ್ವೆನ್ಶನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿ.ಮೀ. ಕ್ರಮಿಸುತ್ತೇವೆ. 6ರಂದು ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಶನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿ.ಮೀ. ಕ್ರಮಿಸುತ್ತೇವೆ. 5ನೇ ದಿನ ಮಂಡ್ಯ ಶಶಿಕಿರಣ್ ಕನ್ವೆನ್ಶನ್ ಹಾಲ್ ನಿಂದ ಆರಂಭವಾಗಿ 16 ಕಿ.ಮೀ., 8ರಂದು ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿಯಿಂದ, 9ರಂದುಶ್ರೀರಂಗಪಟ್ಟಣ ಮಂಜುನಾಥ ಕಲ್ಯಾಣ ಮಂಟಪದಿಂದ ಆರಂಭವಾಗಲಿದೆ. 10ರಂದು ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ ಎಂದರು.
ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬರಲಿದ್ದಾರೆ. ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಇದರ ರೂಟ್ ಮ್ಯಾಪ್ ಸಿದ್ಧಗೊಂಡಿದೆ ಎಂದು ವಿವರ ನೀಡಿದರು.
ಹೋರಾಟಕ್ಕೆ ಸಂದ ಜಯ
ಸುಪ್ರೀಂ ಕೋರ್ಟ್ ನಿನ್ನೆ ಎಸ್ ಸಿ, ಎಸ್ ಟಿ ಒಳ ಮೀಸಲಾತಿ ವಿಚಾರದಲ್ಲಿ ಒಂದು ತೀರ್ಪು ನೀಡಿದೆ. ಎಸ್ಸಿ , ಎಸ್ ಟಿ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯಕ್ಕೆ ಅವಕಾಶ ಕೊಟ್ಟಿದ್ದು, 3 ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ವಿಶ್ಲೇಷಿಸಿದರು.
ಒಳ ಮೀಸಲಾತಿ ಪರವಾಗಿ ಕೇಂದ್ರ ಸರಕಾರ ವಕಾಲತ್ತು ಮಾಡಿತ್ತು ಎಂದರು. ಕೋರ್ಟ್ ತೀರ್ಪಿನ ತೀರ್ಪು ತುರ್ತಾಗಿ ಅನುಷ್ಠಾನದ ಮೂಲಕ ಎಲ್ಲ 101 ಜಾತಿಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ರಾಜ್ಯಪಾಲರನ್ನು ಪ್ರಶ್ನಿಸುವ ಕೆಲಸ- ಆಕ್ಷೇಪ
ನಿನ್ನೆ ಕಾಂಗ್ರೆಸ್ ಸರಕಾರ ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿಯಲ್ಲದೇ ಸಚಿವ ಸಂಪುಟದ ಸಭೆ ನಡೆದಿದೆ. ರಾಜ್ಯಪಾಲರ ನೋಟಿಸ್ಗೆ ಉತ್ತರ ಕೊಡಬೇಕಾದ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ನಡೆಸಿ ರಾಜ್ಯಪಾಲರನ್ನು ಪ್ರಶ್ನಿಸುವ ಕೆಲಸ ಆಗಿದೆ ಎಂದು ಆಕ್ಷೇಪಿಸಿದರು.
ಮುಡಾದಲ್ಲಿ ಕಮಿಷನರ್ ಮೂಲಕ ಸಾವಿರಾರು ನಿವೇಶನ ಲೂಟಿ ಮಾಡಿ ಅಪಾರ ಹಣ ಲೂಟಿ ಮಾಡಿದ್ದಾರೆ. ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ; ಕೆಟ್ಟ ವ್ಯವಸ್ಥೆ ವಿರುದ್ಧ ಎಂದ ವಿಜಯೇಂದ್ರ, ಕಾಂಗ್ರೆಸ್ ಸರಕಾರದಲ್ಲಿ ಬಡವರು, ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಆಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದರು
ಕಾಂಗ್ರೆಸ್ಸಿಗರದು ಪಶ್ಚಾತ್ತಾಪದ ಯಾತ್ರೆ
ಕಾಂಗ್ರೆಸ್ಸಿಗರದು ಪಶ್ಚಾತ್ತಾಪದ ಯಾತ್ರೆ. ಭ್ರಷ್ಟಾಚಾರರಹಿತ ಆಡಳಿತ ನಡೆಸುವ ಭರವಸೆ ನೀಡಿ, ಜನರ ಕಿವಿಗೆ ಹೂ ಮುಡಿಸಿದವರ ಪಶ್ಚಾತ್ತಾಪದ ಯಾತ್ರೆ ಇದು. ನಮ್ಮ ಯಾತ್ರೆ ಯಶಸ್ವಿಯಾಗಲಿ ಎಂದು ಒಂದು ದಿನ ಮುಂಚಿತವಾಗಿ ಈ ಆಂದೋಲನ ಹಮ್ಮಿಕೊಂಡಿದ್ದಾರೆ ಎಂದು ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್, ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಉಪಸ್ಥಿತರಿದ್ದರು.