ಪಠ್ಯಗಳಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸುವ NCERT ಶಿಫಾರಸ್ಸಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅಸಮಾಧಾನ
ಶಿವಮೊಗ್ಗ(ಅ.26): ಶಾಲೆ ಪಠ್ಯದಲ್ಲಿ ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದು ಬದಲಿಸುವ ಉನ್ನತ ಮಟ್ಟದ ಶಿಫಾರಸ್ಸಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಷ್ಟು ದಿನ ಇಂಡಿಯಾ,ಭಾರತ ಎನ್ನುವುದು ಸರಿಯಿತ್ತು.ಚುನಾವಣೆ ಬರುವ ಸಮಯಕ್ಕೆ ಈ ರೀತಿಯ ಸುದ್ದಿಗಳ ಲಗಾಮನ್ನು ಕೇಂದ್ರ ಸರ್ಕಾರ ಹಿಡಿಯುತ್ತಿದೆ.ಶಿಕ್ಷಣದಲ್ಲೂ ಕೇಸರಿಕರಣ ಮಾಡಲು ಹೊರಟಿದ್ದಾರೆ.ಭಾವನಾತ್ಮಕ ವಿಚಾರಗಳನ್ನು ಬದಿಗಿಡಬೇಕು.ಮಕ್ಕಳ ಹಿತದೃಷ್ಟಿಯ ಲಗಾಮು ರಾಜ್ಯ ಸರ್ಕಾರದ ಕೈಯಲ್ಲಿದೆ ಎಂದರು.
ಏಕಾಏಕಿ ಈ ರೀತಿ ಚರ್ಚೆ ನಡೆಯುತ್ತಿದೆ.ಇದರಿಂದ ಹೊಟ್ಟೆ ತುಂಬುತ್ತೇನ್ರಿ.ಭಾರತವನ್ನು ಒಪ್ಪೋಣ,ಇಂಡಿಯಾವನ್ನು ಒಪ್ಪೋಣ.ಆದರೆ ಇಷ್ಟು ದಿನ ಬಂದಾಗಿದೆ.ಇದು ಆಗಬಾರದು. ಸಂಪ್ರದಾಯ ಇರಬೇಕು.ರಾಜ್ಯ ಶಿಕ್ಷಣ ನೀತಿ ಯಾಕೆ ಬೇಕು ಅಂದರೆ ಒಂದು ವ್ಯವಸ್ಥೆ.ನಮ್ಮ ಸಂಸ್ಕೃತಿ.ನಾವು ಮಾತೃಭಾಷೆ ಬಿಟ್ಟುಕೊಡಲ್ಲ.ನೀವು ಹೇರುವ ವಿಚಾರಗಳನ್ನು ಕಾನೂನು ಮಾಡಿಬಿಟ್ಟರೆ,ನಾವು ತಲೆಬಾಗಬೇಕಾಗುತ್ತದೆ.ಕಾನೂನುಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ.ಈ ರೀತಿಯ ಚರ್ಚೆ ಅನಾವಶ್ಯಕ ಎಂದರು.
ಮಕ್ಕಳಿಗೆ ಅವಶ್ಯಕತೆ ಇದ್ದರೆ ಸ್ವಾಗತಿಸುತ್ತೇನೆ.ಮಕ್ಕಳಿಗೆ ಗೊಂದಲ ಸೃಷ್ಟಿ ಮಾಡುತ್ತಿರುವುದು,ಧಾರ್ಮಿಕ ಬೇಧಭಾವ ತರುವುದು,ಸಮಾಜದಲ್ಲಿ ಅಸುರಕ್ಷತೆ ತರುವುದನ್ನು ದಿಕ್ಕರಿಸುತ್ತೇವೆ.ಮಕ್ಕಳು ಬೆಳೆಯುವವರಿಗೆ ಶುದ್ದವಾಗಿ ಬೆಳೆಸುವ ಮನೋಭಾವನೆಯನ್ನು ದೇವರು ಬಿಜೆಪಿಯವರಿಗೆ ಕಲಿಸಲಿ ಎಂದರು.
ಹುಲಿ ಉಗುರು ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಕಾನೂನಿನ ಪರಿಜ್ಣಾನ ಇಟ್ಟುಕೊಳ್ಳಬೇಕು.ದೊಡ್ಡವರಾಗಲಿ ಚಿಕ್ಕವರಾಗಲಿ ಸೂಕ್ಷ್ಮವಾಗಿರಬೇಕು.ಕಾನೂನು ಎಲ್ಲರಿಗೂ ಒಂದೇ ಎಂದರು.
ಬರಗಾಲ ಇದೇ ಅಂತ ಹೇಳಿ ಅನ್ನ ತಿನ್ನುವುದನ್ನು ಕಡಿಮೆ ಮಾಡಲು ಆಗುತ್ತದೆಯಾ.ಅತಿವೃಷ್ಟಿಯಾದಾಗ ಬಿಜೆಪಿಯವರು ಯಾವ ರೀತಿ ಓಡಾಡಿದ್ರು.ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು.ಸರ್ಕಾರದ ಕೆಲಸ ಬಗ್ಗೆ ಪ್ರಶ್ನಿಸಬೇಕು.ಸರ್ಕಾರವನ್ನು ಟೀಕಿಸುವ ಮುಂಚೆ ಬಿಜೆಪಿಯವರು ಈ ಸ್ಥಾನದಲ್ಲಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ಬಿಜೆಪಿಯವರು ಸರ್ಕಾರವನ್ನು ಟೀಕಿಸುವ ಮುಂಚೆ,ಮಾನ ಮಾರ್ಯಾದೆ ಇದ್ದರೆ ರಾಜ್ಯದ ಜಿಎಸ್‌ಟಿ ಪಾಲನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ.ಕಾವೇರಿ ವಿಚಾರ ಮಾತನಾಡಲ್ಲ,ಬರಗಾಲದಿಂದ ನಷ್ಟ ಪರಿಹಾರ ಕೊಡಿಸುವ ಬಗ್ಗೆ ಚಕಾರ ಎತ್ತಲ್ಲ,ಬಗರ್ ಹುಕುಂ ರೈತರ ಬಗ್ಗೆ ಮಾತನಾಡಲ್ಲ,ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.