ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ರೂ : ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ರೂ.ನೀಡಲಾಗುವುದು. ಹಾಗೂ ಪ್ರತಿ ಕ್ಷೇತ್ರದಲ್ಲಿ ಕೆಂಪೇಗೌಡ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 1ಲಕ್ಷ ರೂ.ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಸಾವಿರ ರೂ., ತಾಲೂಕು ಕೇಂದ್ರಗಳಿಗೆ 20 ಸಾವಿರ ರೂ.ಜೊತೆಗೆ ಹೆಚ್ಚುವರಿಯಾಗಿ 1 ಲಕ್ಷ ರೂ.ನೀಡಲಾಗುವುದು. ಜಿಲ್ಲಾ ಕೇಂದ್ರಗಳಿಗೆ 50 ಸಾವಿರ ರೂ.ನೀಡಲಾಗುತ್ತಿದ್ದು ಹೆಚ್ಚು ಮಾಡಲು ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.
ನಾಡಪ್ರಭು ಕೆಂಪೇಗೌಡರ 515ನೆ ಜಯಂತೋತ್ಸವವನ್ನು ಅರಮನೆ ಮೈದಾನ ಅಥವಾ ಹೊರಾಂಗಣ ಮೈದಾನದಲ್ಲಿ ಜೂ.27ರಂದು ನಡೆಸಲು ತೀರ್ಮಾನಿಸಲಾಗಿದೆ. ಹುಲಿಯೂರುದುರ್ಗ, ಮಾಗಡಿ, ಆವತಿ ಸೇರಿದಂತೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದ ಪ್ರತಿವರ್ಷದಂತೆ ಗೋಪುರ ಮತ್ತು ಜ್ಯೋತಿಗಳ ಮೆರವಣಿಗೆ ಬರುತ್ತದೆ ಎಂದು ಶಿವಕುಮಾರ್ ತಿಳಿಸಿದರು.
ಪ್ರಶಸ್ತಿಗೆ ಬಿ.ಎಲ್.ಶಂಕರ್ ನೇತೃತ್ವದ ಆಯ್ಕೆ ಸಮಿತಿ: ‘ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ನೇತೃತ್ವದಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಡಿಎ, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡಲು ಯೋಜಿಸಲಾಗಿದೆ. ಪ್ರಶಸ್ತಿಗೆ ನಾನು ಒಂದಷ್ಟು ಹೆಸರು ಸೂಚಿಸಿದ್ದೆ. ವಾರ್ಡ್ ಮಟ್ಟದಲ್ಲಿ ಅಥವಾ ಬೇರೆ ಸ್ವರೂಪದಲ್ಲಿ ಪ್ರಶಸ್ತಿ ನೀಡಬೇಕಾ ಎಂದು ಗೊಂದಲ ಇರುವ ಕಾರಣಕ್ಕೆ ಮುಂದುವರೆದಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿ ನೀಡಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು.
ಕೆಂಪೇಗೌಡರ ಸಮಾಧಿ-ಕೋಟೆ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೆಂಪೇಗೌಡರ ಮೂಲ ಸಮಾಧಿ ಸ್ಥಳ, ಕೋಟೆಯನ್ನು ಅಭಿವೃದ್ದಿಪಡಿಸುವ ಕ್ರಿಯಾಯೋಜನೆ ಸಿದ್ದ ಪಡಿಸಲಾಗಿದೆ. ಅವರ ಬಗ್ಗೆ ಮಾಹಿತಿಯೂ ಸಿಗಬೇಕು ಹಾಗೂ ಪ್ರವಾಸಿ ಸ್ಥಳವಾಗಿಯೂ ಪರಿವರ್ತನೆಯಾಗಬೇಕು. ಸಚಿವ ಕೆ.ಎಚ್.ಮುನಿಯಪ್ಪ ಅವರ ಕ್ಷೇತ್ರದಲ್ಲಿ ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ದಿಗೆ 10 ಎಕರೆ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಲಾಗುವುದು. ಸುಮ್ಮನಹಳ್ಳಿಯಲ್ಲಿ ಕೆಂಪೇಗೌಡ ಪ್ರಾಧಿಕಾರದ ಕಚೇರಿಗಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಜಯಂತಿಯಂದೇ ಗುದ್ದಲಿಪೂಜೆಗೆ ಯೋಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.