ಖಾಸಗಿ, ಅನುದಾನಿತ ಕಾಲೇಜುಗಳ ವೃತ್ತಿಪರ ಕೋರ್ಸ್‍ಗೆ ಶೇ10ರಷ್ಟು ಶುಲ್ಕ ಹೆಚ್ಚಳ
ಬೆಂಗಳೂರು : ರಾಜ್ಯದ ಖಾಸಗಿ ಮತ್ತು ಅನುದಾನರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿರುವ ವೃತ್ತಿಪರ ಕೋರ್ಸ್‍ಗಳಾದ ಎಂಜಿನಿಯರಿಂಗ್ ಮತ್ತು ಆರ್ಕಿಟಕ್ಚರ್ ಪದವಿಗಳಿಗೆ ಪ್ರಸಕ್ತ ವರ್ಷಕ್ಕೆ ಅನ್ವಯಿಸುವಂತೆ ಶೇ.10ರಷ್ಟು ಶುಲ್ಕ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಶುಕ್ರವಾರ ಇಲ್ಲಿನ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ.ಸುಧಾಕರ್ ನೇತೃತ್ವದಲ್ಲಿ ನಡೆದ ಖಾಸಗಿ, ಅನುದಾನ ರಹಿತ ವೃತ್ತಿಪರ ಕೋರ್ಸ್‍ಗಳ ಕಾಲೇಜು ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಒತ್ತಾಯಿಸಿತ್ತು. ಆದರೆ ಸುದೀರ್ಘ ಚರ್ಚೆಯ ಬಳಿಕ ಕಳೆದ ವರ್ಷದ ಶುಲ್ಕಕ್ಕಿಂತ ಶೇ.10ರಷ್ಟು ಹೆಚ್ಚಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಶ್ರೀಕರ್, ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನಕುಮಾರ್, ಖಾಸಗಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಶ್ಯಾಮ್, ಧಾರ್ಮಿಕ ಅಲ್ಪಸಂಖ್ಯಾತ ತಾಂತ್ರಿಕ ಶಿಕ್ಷಣ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ಶಫಿ ಅಹಮದ್, ಎಂ.ಎಸ್.ರಾಮಯ್ಯ, ತಾಂತ್ರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಂ.ಆರ್.ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.