'ಕ್ಷೀರಭಾಗ್ಯ' ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 'ಕ್ಷೀರ ಭಾಗ್ಯ' ಜಾರಿಯಾಗಿ ಇಂದಿಗೆ 10 ವರ್ಷ ಕಳೆದಿದೆ.
ಈ ಕುರಿತು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಕರ್ನಾಟಕದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಹೈನುಗಾರಿಕೆಯನ್ನು ಮತ್ತಷ್ಟು ಲಾಭದಾಯಕ ಉದ್ಯೋಗವಾಗಿಸಿ, ಅವರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ 2013ರ ಆಗಸ್ಟ್ 1 ರಂದು ನಮ್ಮ ಸರ್ಕಾರವು ಶಾಲಾ ಮಕ್ಕಳಿಗೆ ನಿತ್ಯ ಕೆನೆಭರಿತ ಹಾಲು ನೀಡುವ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ನೀಡಿತ್ತು. ನಮ್ಮ ಈ ಯೋಜನೆ ಜಾರಿಯಾಗಿ ಇಂದಿಗೆ ಹತ್ತು ವರ್ಷಗಳು ತುಂಬಿದೆ. ಪ್ರತಿನಿತ್ಯ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ನೆರವಾದ ಸಂತೃಪ್ತಿ ನನ್ನದು'' ಎಂದು ಹೇಳಿದ್ದಾರೆ.
''ವಿಶ್ವ ಡೇರಿ ಫೆಡರೇಷನ್ನಿಂದ ನೀಡಲಾಗುವ "ಅಂತಾರಾಷ್ಟ್ರೀಯ ಅತ್ಯುತ್ತಮ ಯೋಜನೆ ಪ್ರಶಸ್ತಿ - 2022" ಅನ್ನು ನಮ್ಮ ಈ ಯೋಜನೆ ಪಡೆದಿದ್ದು, ಯೋಜನೆಯನ್ನು ಜಾರಿಗೆ ಕೊಟ್ಟ ನನಗಿದು ಹೆಮ್ಮೆಯುಂಟು ಮಾಡಿದೆ'' ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.