ಗಾಂಧೀಜಿಯ ಬೆಳಗಾವಿ ಅಧಿವೇಶನಕ್ಕೆ 100 ವರ್ಷ; ಜಂಟಿ ಅಧಿವೇಶನಕ್ಕೆ ಬರಾಕ್ ಒಬಾಮಾರಿಗೆ ಆಹ್ವಾನ: ಎಚ್.ಕೆ.ಪಾಟೀಲ್
ಬರಾಕ್ ಒಬಾಮ (Photo credit: Facebook)
ಗದಗ: ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಎಐಸಿಸಿ ಅಧಿವೇಶನಕ್ಕೆ 100 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆ ನೆನಪನ್ನು ಮೆಲುಕು ಹಾಕಲು 2024ರ ಅ.2ರಿಂದ 2025ರ ಅ.2ರವರೆಗೆ ಶತಮಾನೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಮಾಧ್ಯಮದವರ ಜೊತೆಗೆ ಸೋಮವಾರ ಮಾತನಾಡಿದ ಅವರು, ಈ ಅವಧಿಯಲ್ಲಿ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಜತೆಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಕ್ಕೆ ಬರುವಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಬರಾಕ್ ಒಬಾಮಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 2024ರ ಡಿಸೆಂಬರ್ ಅಥವಾ 2025ರ ಜ.1ರ ನಂತರ ಹಾಗೂ ಅ.2ರ ನಡುವಿನ ಅವಧಿಯಲ್ಲಿ ಅನುಕೂಲ ನೋಡಿಕೊಂಡು ಬರುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ’ ಎಂದು ತಿಳಿಸಿದರು.