ಚಿರತೆ ದಾಳಿಗೆ ಬಲಿಯಾದ ಬಾಲಕಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಚಿವ ಈಶ್ವರ ಖಂಡ್ರೆ ಸೂಚನೆ
ಮೈಸೂರು: ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಬಾಲಕಿ ಮೃತಪಟ್ಟಿದ್ದು, ಬಾಲಕಿ ಕುಟುಂಬಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ 15 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕಿ ಸುಶೀಲಾ ಸಾವು ವಿಚಾರ ಕೇಳಿ ಬೇಸರ ಆಗಿದ್ದು, ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಲು ಸೂಚನೆ ನೀಡಿ, 4 ಸಾವಿರ ಮಾಸಾಶನ ಬರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟು ಜಾರಿಗೊಳಿಸಲು ಪ್ರಯತ್ನ ಪಡುತ್ತೇನೆ'' ಎಂದರು.
ಜೂ.26ರ ರಾತ್ರಿ ತಮ್ಮ ಮನೆ ಬಳಿ ಚಿರತೆ ದಾಳಿಗೆ ಸಿಲುಕಿದ್ದ ಬಾಲಕಿಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸುಶೀಲಾ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
Next Story