ರಾಜ್ಯದ 161 ತಾಲೂಕುಗಳು ಬರ ಘೋಷಣೆಗೆ ಅರ್ಹ; ಸಿಎಂಗೆ ಶಿಫಾರಸು: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಸೆ. 13: ರಾಜ್ಯದ 195 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಬರ ಘೋಷಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ವಾರದಿಂದ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮತ್ತು ಬೆಳೆ ಪರಿಶೀಲನೆ (ಗ್ರೌಂಡ್ ಟ್ರುತಿಂಗ್) ನಡೆಸಲಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ ಎಂದರು.
ಇದಲ್ಲದೆ, 34 ತಾಲೂಕುಗಳಲ್ಲೂ ಸ್ಥಿತಿ ಚಿಂತಾಜನಕವಾಗಿದ್ದು ಕೇಂದ್ರ ಮಾರ್ಗಸೂಚಿ ಅನ್ವಯಿಸದಿದ್ದರೂ ಈ ತಾಲೂಕುಗಳನ್ನೂ ಸಹ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ಇಂದು ನಡೆದ ಐದನೆ ಸಂಪುಟ ಉಪಸಮಿತಿ ಸಭೆಯಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬರ ಘೋಷಣೆಗೆ ಮುಖ್ಯಮಂತ್ರಿಗೆ ಶಿಫಾರಸ್ಸು ಮಾಡಲಾಗಿದೆ. ಅಲ್ಲದೆ, ಈ ಕುರಿತು ಕೇಂದ್ರಕ್ಕೆ ಮನವಿ (ಮೆಮೊರಾಂಡಮ್) ಸಲ್ಲಿಸಲು ಸಿದ್ದತೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ವಾರ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲೆ 62ತಾಲೂಕುಗಳು ಕೇಂದ್ರ ಮಾರ್ಗಸೂಚಿಯಂತೆ ಬರ ಘೋಷಣೆಗೆ ಅರ್ಹ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೂ ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಇದ್ದ ಕಾರಣಕ್ಕೆ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಪರಿಶೀಲನೆಗೆ ಸೂಚಿಸಲಾಗಿತ್ತು. ಎಲ್ಲ ತಾಲೂಕುಗಳ ವರದಿಯೂ ನಿನ್ನೆ ಕೈಸೇರಿದ್ದು ಇದರ ಆಧಾರದ ಮೇಲೆ ಬರ ತಾಲೂಕುಗಳ ಪಟ್ಟಿ ಸಿದ್ದಪಡಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
40 ತಾಲೂಕುಗಳಲ್ಲೂ ಭಾಗಶಃ ಬರ: ಬರ ಘೋಷಣೆ ಸಂಬಂಧ ಶಿಫಾರಸ್ಸು ಮಾಡಲಾಗಿರುವ 195 ತಾಲೂಕುಗಳಲ್ಲದೆ, ಇನ್ನೂ 40 ತಾಲೂಕುಗಳಲ್ಲಿ ಭಾಗಶಃ ಬರದ ಸ್ಥಿತಿ ಇದೆ. ಆದರೆ, ಈ ತಾಲೂಕುಗಳನ್ನೂ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲು ಕೇಂದ್ರದ ಮಾರ್ಗಸೂಚಿ ಅಡ್ಡಿಯಾಗಿದೆ ಎಂದು ಅವರು ಹೇಳಿದರು.
ಹೀಗಾಗಿ 15 ದಿನಗಳ ನಂತರ ಸ್ಯಾಟಲೈಟ್ ಇಮೇಜ್ ಆಧರಿಸಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆಗೆ ಸೂಚಿಸಲಾಗುವುದು. ಈ ವೇಳೆ ಸಮೀಕ್ಷೆಗೆ ಒಳಪಟ್ಟ ತಾಲೂಕು ‘ಕೇಂದ್ರದ ಬರ ಮಾರ್ಗಸೂಚಿ’ಗೆ ಅನ್ವಯಿಸಿದರೆ ಎರಡನೆ ಹಂತದಲ್ಲಿ ಬರ ಘೋಷಣೆ ಮಾಡಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಅಕ್ಟೋಬರ್ ಕೊನೆಯ ವರೆಗೆ ಬೆಳೆ ಸಮೀಕ್ಷೆ ನಡೆಸಿ ಬರ ಘೋಷಣೆಗೆ ಅವಕಾಶ ಇದೆ. ಹೀಗಾಗಿ ಈಗ ತಿಳಿಸಿರುವ 195 ತಾಲೂಕುಗಳೆ ಅಂತಿಮವಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಷ್ಟು ತಾಲೂಕುಗಳನ್ನೂ ‘ಬರ ಪೀಡಿತ’ ಎಂದು ಘೋಷಿಸಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಮತ್ತೊಂದು ಮನವಿ (ಮೆಮೊರಾಂಡಮ್) ಸಲ್ಲಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ಈಗಾಗಲೇ ಪ್ರತಿ ತಾಲೂಕುಗಳಲ್ಲೂ ಟಾಸ್ಕ್ ಫೆÇೀರ್ಸ್ ರಚನೆಗೆ ಸಿದ್ದತೆ ನಡೆಸಲಾಗಿದೆ. ಅಲ್ಲದೆ, ಬರ ಘೋಷಿಸುತ್ತಿದ್ದಂತೆ, ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ 100 ದಿನಗಳ ಮಾನವ ದಿನವನ್ನು 150 ದಿನಕ್ಕೆ ಹೆಚ್ಚಿಸಲಾಗುವುದು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಈಗಾಗಲೆ ಚರ್ಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ನೀರಿಗೂ, ಮೇವಿಗೂ ಕೊರತೆ ಇಲ್ಲ: ರಾಜ್ಯದಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತೀವ್ರ ಅಭಾವ ಇಲ್ಲ. ಕುಡಿಯುವ ನೀರಿನ ಪೂರೈಕೆ ಸಲುವಾಗಿಯೆ ಎಲ್ಲ ಜಿಲ್ಲಾ ಪಂಚಾಯತ್ ಸಿಇಓ ಗಳ ಖಾತೆಗೆ ಈಗಾಗಲೆ ಒಂದು ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಅಲ್ಲದೆ, ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 462 ಕೋಟಿ ಹಣ ಇದೆ. ಈ ಹಣವನ್ನು ಕುಡಿಯುವ ನೀರು ಪೂರೈಕೆಗೆ ಬಳಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಅಗತ್ಯವಿದ್ದ ಸ್ಥಳಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಬೋರ್ ಗಳ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ. ಬರ ಘೋಷಣೆಗೆ ಮುನ್ನವೆ ಅಗತ್ಯ ಮೇವಿನ ದಾಸ್ತಾನಿಗೆ ಸೂಚಿಸಲಾಗಿದೆ. ಅಲ್ಲದೆ, ರೈತರಿಗೆ ಮೇವಿನ ಭಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಲು 20 ಕೋಟಿ ರೂ. ನೀಡಲಾಗಿದೆ ಎಂದು ಅವರು ತಿಳಿಸಿದರು.
ವೈಜ್ಞಾನಿಕ ಸಂಶೋಧನೆಗೆ ಸೂಚನೆ: ಕೇಂದ್ರದ ಮಾರ್ಗಸೂಚಿಗೆ ಒಳಪಡದ/ಅನ್ವಯಿಸದ 40 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದೆ. ಬೆಳೆ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಆದರೂ, ಸ್ಯಾಟಲೈಟ್ ಇಮೇಜ್ ನಲ್ಲಿ ತೇವಾಂಶದ ಹಸಿರು ಹೊದಿಕೆ ಕಂಡುಬಂದಿದೆ. ಕೇಂದ್ರ ಸರಕಾರ ಬರ ಘೋಷಣೆಗೆ ಮುನ್ನ ಈ ಸ್ಯಾಟಲೈಟ್ ಇಮೇಜ್ ಗಳನ್ನು ಪರಿಶೀಲಿಸುವುದು ವಾಡಿಕೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಹೀಗಾಗಿ ಈ ಇಮೇಜ್ ಗಳು ಬರ ಘೋಷಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ನೀಡುವಂತೆ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯ ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಶೇ.28 ರಷ್ಟು ಮಳೆ ಕೊರತೆ: ರಾಜ್ಯದಲ್ಲಿ ಈ ವರ್ಷ ಒಟ್ಟಾರೆ ಶೇ.28 ರಷ್ಟು ಮಳೆ ಕೊರತೆ ಉಂಟಾಗಿದೆ. ಮಳೆನಾಡಿನಲ್ಲಿ ಶೇ.40 ರಷ್ಟು ಮಳೆ ಕೊರತೆಯಾಗಿದ್ದು ಆಘಾತಕಾರಿ. ಕಾವೇರಿ ಒಳಹರಿವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೆ.12 ರಿಂದ 20ರ ವರೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೃಷಿ ಸಚಿವ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಮುಖ್ಯ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಸೇರಿದಂತೆ ಸಂಬಂಧಿತ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.